* ಮಣಿ​ಪು​ರದ ಇಂಫಾಲ್‌ ಜಿಲ್ಲಾ​ಡ​ಳಿ​ತದ ಹೊಸ ಅಭಿ​ಯಾ​ನ* ಲಸಿಕೆ ಪಡೀರಿ: ಟೀವಿ, ಮೊಬೈಲ್‌ ಗೆಲ್ಲಿ

ಇಂಫಾ​ಲ್‌(ಅ.18): ಭಾಷಣ, ಹಾಡು ಸ್ಪರ್ಧೆ ಅಥವಾ ಕ್ರೀಡಾಕೂಟಗಳಲ್ಲಿ ಗೆದ್ದರೆ ಬಹುಮಾನದ ರೂಪದಲ್ಲಿ ಟಿವಿ, ಮೊಬೈಲ್‌ ಕೊಡುವುದನ್ನು ನೋಡಿದ್ದೀರಿ. ಆದರೆ ಕೋವಿಡ್‌ ಲಸಿಕೆ(Vaccine) ಪಡೆಯುವವರಿಗೆ ಇಂತಹದ್ದೇ ಭರವಸೆ ನೀಡಿದ್ದು ಮಣಿಪುರದ(manipur) ಇಂಫಾಲ(Imphal) ಪಶ್ವಿಮ ಜಿಲ್ಲೆಯಲ್ಲಿ ವರದಿಯಾಗಿದೆ.

ಲಸಿಕೀಕರಣ(Vaccination) ಹೆಚ್ಚಿಸಲು ಜಿಲ್ಲಾಡಳಿತವು ಮೆಗಾ ಲಸಿಕಾ ಅಭಿಯಾನ ಕೈಗೊಂಡಿದ್ದು, ‘ಲಸಿಕೆ ಪಡೆದುಕೊಳ್ಳಿ, ಬಹುಮಾನ ಗೆಲ್ಲಿರಿ’ ಎಂದು ಘೋಷ ವಾಕ್ಯದೊಂದಿಗೆ ಅ.24, ಅ.31 ಹಾಗೂ ನ.7ರಂದು ಅಭಿಯಾನ ನಡೆಸಲಿದೆ.

ಲಸಿಕೆ ಹಾಕಿಸಿ ಡ್ರಾದಲ್ಲಿ ಗೆದ್ದರೆ ಮೊದಲ ಬಹುಮಾನವಾಗಿ ಟಿವಿ, ದ್ವಿತೀಯ ಮೊಬೈಲ್‌, ತೃತೀಯ ಬಹುಮಾನವಾಗಿ ಬ್ಲಾಂಕೆಟ್‌ ಗೆಲ್ಲಬಹುದು. ಜೊತೆಗೆ, 10 ಮಂದಿಗೆ ಸಮಾಧಾನಕಾರ ಬಹುಮಾನವೂ ಸಿಗಲಿದೆ.

ಕೋವ್ಯಾಕ್ಸಿನ್‌ಗೆ ಅ.26ಕ್ಕೆ ಜಾಗತಿಕ ಮನ್ನಣೆ ಸಾಧ್ಯತೆ

ಭಾರತ್‌ ಬಯೋಟೆಕ್‌(Bharat Biotech) ಅಭಿವೃದ್ಧಿಪಡಿಸಿರುವ ಭಾರತದ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್‌ಗೆ ಅ.26ರಂದು ಜಾಗತಿಕ ಮನ್ನಣೆ ಲಭಿಸುವ ಸಾಧ್ಯತೆಯಿದೆ. ಅ.26ರಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೋವ್ಯಾಕ್ಸಿನ್‌(Covaxine) ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ(World Health organisation) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಅವರು ತಿಳಿಸಿದರು.

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿರುವ ಸೌಮ್ಯಸ್ವಾಮಿನಾಥನ್‌, ‘ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವ ಬಗ್ಗೆ ಭಾರತ್‌ ಬಯೋಟೆಕ್‌ ಸಂಸ್ಥೆಯ ಜತೆ ನಿಕಟವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ವ್ಯಾಪಕ ಲಸಿಕೆಗಳಿಗೆ ಮಾನ್ಯತೆ ನೀಡುವ ಮುಖಾಂತರ ಆ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದೇ ತಮ್ಮ ಗುರಿಯಾಗಿದೆ’ ಎಂದು ಹೇಳಿದ್ದಾರೆ.

2ನೇ ಅಲೆ ಮುಗಿ​ದಿ​ಲ್ಲ: ಕೇಂದ್ರ ಸರ್ಕಾ​ರ ಎಚ್ಚ​ರಿ​ಕೆ

ಕಳೆದ ಕೆಲ ದಿನಗಳಿಂದ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಯಾರೂ ಸಹ ಮೈಮರೆಯಬಾರದು ಎಂದು ದೇಶದ ಜನತೆಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ವಿ.ಕೆ. ಪೌಲ್‌ ಅವರು, ‘ದೇಶದಲ್ಲಿ ದೈನಂದಿನ ಕೋವಿಡ್‌ ಸಂಖ್ಯೆ ಕಮ್ಮಿಯಾಗಿದೆ. ಎರಡನೇ ಅಲೆ ಇಳಿಮುಖವಾಗಿದೆ ಎಂಬ ಕಾರಣಕ್ಕೆ ಕೋವಿಡ್‌ ಅಲೆಯೇ ಮುಕ್ತಾಯವಾಗಿದೆ ಎಂದು ತಿಳಿಯುವುದು ತಪ್ಪಾದೀತು. ವಿಶ್ವದ ಹಲವು ದೇಶಗಳನ್ನು ಕೊರೋನಾ ವೈರಸ್‌ನ 2ಕ್ಕಿಂತ ಹೆಚ್ಚು ಅಲೆಗಳು ಬಾಧಿಸಿರುವುದನ್ನು ನಾವು ಕಂಡಿದ್ದೇವೆ. ದೇಶದಲ್ಲಿ ಸಾಲು-ಸಾಲು ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇದು ನಿರ್ಣಾಯಕ ಸಂದರ್ಭವಾಗಿದ್ದು, ಕೋವಿಡ್‌ ಮತ್ತೆ ವ್ಯಾಪಕವಾಗಿ ಹಬ್ಬುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

ದೇಶದಲ್ಲಿ ಈಗ ಅಗತ್ಯವಿರುವಷ್ಟುಲಸಿಕೆಯಿದ್ದು, ಲಸಿಕೆ ಕೊರತೆಯಂತೂ ಇಲ್ಲ. ಕೆಲ ಕಾರಣಗಳಿಗಾಗಿ ಲಸಿಕಾ ಕಾರ್ಯಕ್ರಮದಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳು ಲಸಿಕೆ ಅಭಿಯಾನಕ್ಕೆ ಚುರುಕು ನೀಡಬೇಕು ಎಂದು ಸೂಚಿಸಿದೆ.