ಕೋಲ್ಕತಾ(ಏ.11): 16 ವರ್ಷಗಳ ಹಿಂದೆ ಸಾವನ್ನಪ್ಪಿದ ತನ್ನ ಸೋದರಿಯ ನೆನಪಿನಲ್ಲಿ ಕಟ್ಟಿದ್ದ ಆಸ್ಪತ್ರೆಯನ್ನು ಕೊರೋನಾ ಸೋಂಕಿತರ ಕ್ವಾರಂಟೈನ್‌ ಹೋಮ್‌ಗೆ ನೀಡುವ ಮೂಲಕ ಪಶ್ಚಿಮ ಬಂಗಾಳದ ಮೊಹಮ್ಮದ್‌ ಸೈದುಲ್‌ ಲಷ್ಕರ್‌ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಕ್ಷಿಣ 24 ಪರಂಗಣ ಜಿಲ್ಲೆಯ ಪುನ್ರಿ ಗ್ರಾಮದ ಸೈದುಲ್‌ರ ಸೋದರಿ ಮರುಫಾ 2004ರಲ್ಲಿ ನ್ಯುಮೋನಿಯಾಗೆ ಬಲಿಯಾಗಿದ್ದರು. ಅವರ ನೆನಪಲ್ಲಿ ಆಸ್ಪತ್ರೆ ಕಟ್ಟಲು ಮುಂದಾದ ಸೈದುಲ್‌, ಇದಕ್ಕಾಗಿ ತಮ್ಮ ಬಳಿ ಇದ್ದ 4 ಟ್ಯಾಕ್ಸಿ ಮಾರಿದ್ದರು. ಆದರೂ ಹಣ ಸಾಲದಾದಾಗ, ಪತ್ನಿಯ ಆಭರಣವನ್ನೂ ಮಾರಿ ಆಸ್ಪತ್ರೆ ನಿರ್ಮಿಸಿದ್ದರು. ಆಸ್ಪತ್ರೆ ನಿರ್ಮಾಣದ ವೇಳೆ ಹಲವು ವೇಳೆ ಮನೆಯಲ್ಲಿ ತಿನ್ನಲು ಏನೂ ಇರದೇ ಇದ್ದಾಗ ಬರೀ ಮಂಡಕ್ಕಿ ತಿಂದೇ ಕಾಲ ಕಳೆದಿದ್ದರು. ಕೊನೆಗೂ ಆಸ್ಪತ್ರೆ ಪೂರ್ಣಗೊಂಡ ಬಳಿಕ ಅದಕ್ಕೆ ಸೋದರಿ ಹೆಸರಿಟ್ಟಿದ್ದರು.

ಒಬ್ಬ ಕಳ್ಳನಿಂದ 17 ಪೊಲೀಸ್, ಜಡ್ಜ್‌ ಕ್ವಾರಂಟೈನ್‌ಗೆ!

ಈ ಆಸ್ಪತ್ರೆಗೆ ಪ್ರಸಕ್ತ ನಿತ್ಯವೂ 300ಕ್ಕೂ ಹೆಚ್ಚು ಹೊರರೋಗಿಗಳು ಬಂದು ಹೋಗುತ್ತಾರೆ. ಅದನ್ನು ಇನ್ನಷ್ಟುಆಧುನೀಕರಿಸಲು ಈಗಲೂ ಸೈದುಲ್‌ ಯತ್ನ ಮಾಡುತ್ತಲೇ ಇದ್ದಾರೆ. ಈ ನಡುವೆ ಕೊರೋನಾ ಸೋಂಕು ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಅವರೀಗ ತಮ್ಮ ಆಸ್ಪತ್ರೆಯನ್ನು ಸ್ವಯಂಪ್ರೇರಣೆಯಿಂದ ಕ್ವಾರಂಟೈನ್‌ ಹೋಮ್‌ಗೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಜಿಲ್ಲಾಡಳಿತವೂ ಒಪ್ಪಿ, ರಾಜ್ಯ ಸರ್ಕಾರದ ಅನುಮೋದನೆ ಕೋರಿ ಪತ್ರ ಬರೆದಿದೆ. ಒಂದು ವೇಳೆ ರಾಜ್ಯ ಸರ್ಕಾರವೂ ಇದಕ್ಕೆ ಒಪ್ಪಿಕೊಂಡರೆ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕ್ವಾರಂಟೈನ್‌ ಹೋಮ್‌ ಆಗಿ ಬದಲಾಗಲಿದೆ.