ಭೋಪಾಲ್‌(ಡಿ.13): 10 ಕಾಮೋದ್ರೇಕ ಮಾತ್ರೆಗಳನ್ನು ಸೇವಿಸಿದ್ದ ವ್ಯಕ್ತಿಯೊಬ್ಬರು, ತೀವ್ರ ಅಸ್ವಸ್ಥರಾಗಿ ನಾಲ್ಕೇ ದಿನದಲ್ಲಿ ಮೃತಪಟ್ಟಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಬಾಬು ಮೀನಾ (25) ಎಂಬವರೇ ಮಾತ್ರೆ ಓವರ್‌ಡೋಸ್‌ನಿಂದಾಗಿ ಮೃತಪಟ್ಟವರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದರೂ, ಆತ್ಮಹತ್ಯೆ ಪತ್ರ ಸಿಗದೆ ಇರುವುದರಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮೀನಾ ಡಿ.7ರಂದು 10 ಕಾಮೋದ್ರೇಕ ಮಾತ್ರೆಗಳನ್ನು ಸೇವಿಸಿದ್ದರು. ಇದಾದ ಬಳಿಕ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭವಾಗಿತ್ತು. ವಾಕರಿಕೆ, ವಾಂತಿ, ತಲೆ ಸುತ್ತುವುದು ಹಾಗೂ ತೀವ್ರ ಹೊಟ್ಟೆನೋವು ಅವರನ್ನು ಕಾಡಿತ್ತು. ಚಿಕಿತ್ಸೆ ಪಡೆದ ಬಳಿಕವೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ.

ಬಳಿಕ ಉಸಿರಾಟದ ತೊಂದರೆಯೂ ಕಾಡಿದ್ದು, ಡಿ.9 ರಂದು ಸಂಜೆ 6 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಮರುದಿನ ನಡುರಾತ್ರಿ 2 ಗಂಟೆಗೆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.