ಮುಂಬೈ(ಜು.16): #BabyPenguin ಈ ಹ್ಯಾಶ್‌ಟ್ಯಾಗ್ ಹಲವರಿಗೆ ಆಶ್ಚರ್ಯ, ಹಲವರಲ್ಲಿ ನಗು, ಇನ್ನು ಕೆಲವರಲ್ಲಿ ಆಕ್ರೋಶ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಬೇಬಿ ಪೆಂಗ್ವಿನ್ ಭಾರಿ ಟ್ರೆಂಡ್ ಆಗಿದೆ. ಇಷ್ಟೇ ಅಲ್ಲ ಕೋಲಾಹಲ ಸೃಷ್ಟಿಸಿದೆ. ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಸಚಿವ ಆದಿತ್ಯ ಠಾಕ್ರೆಯನ್ನು ಬೇಬಿ ಪೆಂಗ್ವಿನ್ ಎಂದು ಕರೆಯಲಾಗಿದೆ. ಇಷ್ಟೇ ಅಲ್ಲ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಆಧುನಿಕ ಔರಂಗಜೇಬ್ ಎಂದು ಕರೆಯಲಾಗಿದೆ.

ದಿಶಾ ಪಟಾನಿ ಮುಂಬೈಗೆ ಬಂದಾಗ ಕೈಯಲ್ಲಿ ಇದ್ದದ್ದು ಕೇವಲ 500 ರೂ. ಅಂತೆ!

ಟ್ವಿಟರ್‌ನಲ್ಲಿ ಸಮೀತ್ ಥಕ್ಕರ್ ಅನ್ನೋ ವ್ಯಕ್ತಿ ಆದಿತ್ಯ ಠಾಕ್ರೆ ಕಾರ್ಯವನ್ನು ಟೀಕಿಸಲು ಬೇಬಿ ಪೆಂಗ್ವಿನ್ ಹೆಸರನ್ನು ಬಳಸಿಕೊಂಡಿದ್ದಾರೆ. ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಮೀತ್ ಟ್ವೀಟ್ ವಿರುದ್ಧ ಕೆಂಡಾಮಂಡಲವಾಗಿರುವ ಶಿವಸೇನಾ ಇದೀಗ ದೂರು ದಾಖಲಿಸಿದೆ. ಶಿವ ಸೇನೆಯ ಯುವ ಸೇನಾ ವಿಭಾಗದ ಧರ್ಮೆಂದ್ರ ಮಿಶ್ರಾ ಅವರು ವಿಪಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮೀತ್ ಥಕ್ಕರ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಫಾಲೋ ಮಾಡುತ್ತಿರುವ ಸಮೀತ್ ಥಕ್ಕರ್ ಹಲವು ಭಾರಿ ರಾಜಕೀಯ ಮುಖಂಡರ ವಿರುದ್ಧ ಈ ರೀತಿ ಪದ ಬಳಕೆ ಮಾಡಿದ್ದಾರೆ. ಹೀಗಾಗಿ  ದೂರು ನೀಡಿದ್ದೇನೆ ಎಂದು ಧರ್ಮೇಂದ್ರ ಮಿಶ್ರಾ ಹೇಳಿದ್ದಾರೆ.

'ಮಹಾ' ಸರ್ಕಾರ ಸಂಪುಟ ವಿಸ್ತರಣೆ: ಆದಿತ್ಯ ಠಾಕ್ರೆಗೆ ಸಚಿವ ಸ್ಥಾನ!

ಆದಿತ್ಯ ಠಾಕ್ರೆಗೆ ಬೇಬಿ ಪೆಂಗ್ವಿನ್ ಎಂದು ಹೆಸರಿಡಲು ಕಾರಣವೇನು?
ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಮುಂಬೈನ ಮೃಗಾಲಯಕ್ಕೆ ಪೆಂಗ್ವಿನ್ ತರಿಸಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಆದಿತ್ಯ ಠಾಕ್ರೆ ಬಹುನಿರೀಕ್ಷಿಯ ಯೋಜನೆಯಡಿ ಮುಂಬೈನ ಬೈಕುಲಾ ಝೂಗೆ ವಿದೇಶದಿಂದ ಪೆಂಗ್ವಿನ್ ತರಿಸಲಾಗಿದೆ. ಪೆಂಗ್ವಿನ್‌ಗಾಗಿ ಕೃತಕ ವಾತಾವಾರಣ ಸೃಷ್ಟಿಸಲಾಗಿದೆ. ಇದಕ್ಕಾಗಿ 2.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 8 ಪೆಂಗ್ವಿನ್‌ ಖರೀದಿ ಮಾಡಿ ಝೂಗೆ ಸೇರಿಲಾಗಿತ್ತು.

ಝೂ ಅಧಿಕಾರಿಗಳು, ತಜ್ಞರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಆದಿತ್ಯ ಠಾಕ್ರೆ ತಮ್ಮ ಕಾರ್ಯಸಾಧಿಸಿದ್ದರು. ಕೃತಕ ವಾತಾವರಣ ನಿರ್ಮಾಣದಿಂದ ಒಂದೇ ವಾರದಲ್ಲಿ ಒಂದು ಪೆಂಗ್ವಿನ್ ಸತ್ತಿತ್ತು. ಇನ್ನು ಎರಡು ವಾರದ ಬಳಿಕ ಪೆಂಗ್ವಿನ್ ಮರಿಯೊಂದು ಸತ್ತಿತ್ತು. ತಂಪಾದ, ಹಿಮದ ವಾತಾರವಣದಲ್ಲಿ ಇರುವ ಪೆಂಗ್ವಿನ್‌ಗಳನ್ನು ಮುಂಬೈನಂತ ಸುಡು ಬಿಲಿಸಿನ ವಾತಾವರಣದಲ್ಲಿ ಬೆಳೆಸುವುದು ಅಸಾಧ್ಯ. ಇಷ್ಟೇ ಅಲ್ಲ ಪೆಂಗ್ವಿನ್ ಆರೈಕೆ ಮಾಡಲು ಝೂನ ಅಧಿಕಾರಿಗಳು ಸರಿಯಾದ ತರಬೇತಿ ಇಲ್ಲ ಎಂದು ತಜ್ಞರು ಹೇಳಿದ್ದರು.

ತಜ್ಞರ ಸಲಹೆ ಧಿಕ್ಕರಿ, ಗೊತ್ತು ಗುರಿ ಇಲ್ಲದ ಕಾರ್ಯಸಾಧನೆಗೆ ಇಳಿದ ಆದಿತ್ಯ ಠಾಕ್ರೆ ವಿರುದ್ಧ ಆಕ್ರೋಶಗಳು ಕೇಳಿ ಬಂದಿತ್ತು. ಇದೇ ಪೆಂಗ್ವಿನ್ ಕತೆಯನ್ನು ಮೂಲವಾಗಿಟ್ಟುಕೊಂಡು ಆದಿತ್ಯ ಠಾಕ್ರೆ ಹಾಗೂ ಸಿಎಂ ಉದ್ಧವ್ ಠಾಕ್ರೆಯನ್ನು ನಿರ್ಧಾರಗಳನ್ನು ಸಮೀತ್ ಥಕ್ಕರ್ ಸಾಮಾಜಿಕ ಜಾಲತಾಣಲ್ಲಿ ಟೀಕಿಸಿದ್ದಾರೆ. 

ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಸಮೀತ್ ಥಕ್ಕರ್, ನಾನು ಯಾವುದೇ ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ. ಸರ್ಕಾರದ ತಪ್ಪುಗಳನ್ನು ಟೀಕಿಸುವುದು ಭಾರತೀಯ ಪ್ರಜೆಗಿರುವ ಹಕ್ಕು. ಯಾವುದೇ ಆಕ್ಷೇಪಾರ್ಹ ಪದವಿದ್ದರೆ ಟ್ವಿಟರ್ ಖಾತೆ ಬ್ಲಾಕ್ ಆಗುತ್ತಿತ್ತು. ಟ್ವಿಟರ್ ಯಾಕೆ ಮಾಡಿಲ್ಲ. ಹೀಗಾಗಿ ನಾನು ಯಾವ ಟ್ವೀಟ್ ಕೂಡ ಡೀಲಿಟ್ ಮಾಡುವುದಿಲ್ಲ. ಸದ್ಯ ಲಾಕ್‌ಡೌನ್ ಇರುವ ಕಾರಣ ಪೊಲೀಸ್ ಠಾಣೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಈ ಕುರಿತು ವಿವರವಾಗಿ ಪೊಲೀಸ್ ಕಮಿಷನರ್‌ಗೆ ಇ ಮೇಲ್ ಮಾಡಿದ್ದೇನೆ ಎಂದು ಸಮೀತ್ ಥಕ್ಕರ್ ಹೇಳಿದ್ದಾರೆ.