Jaipur street harassment: ಅಂಗಡಿಯೊಂದರ ಮುಂದೆ ನಿಂತಿದ್ದ ಮಹಿಳೆಯನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಮುಟ್ಟಿದ ಘಟನೆ ನಡೆದಿದ್ದು, ಇದರಿಂದ ಕುಪಿತಗೊಂಡ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹಿಳೆಯ ಎದೆಗೆ ಕೈ ಹಾಕಲು ಯತ್ನಿಸಿ ಅಸಭ್ಯ ವರ್ತನೆ
ಜೈಪುರ: ಅಂಗಡಿಯೊಂದರ ಮುಂದೆ ನಿಂತಿದ್ದ ಮಹಿಳೆಯನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಮುಟ್ಟಿದ ಘಟನೆ ನಡೆದಿದ್ದು, ಇದರಿಂದ ಕುಪಿತಗೊಂಡ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬರು ಸ್ವೀಟ್ ಶಾಪೊಂದರ ಮುಂದೆ ನಿಂತಿದ್ದು, ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೊಬ್ಬ ಮಹಿಳೆಯ ಎದೆಭಾಗಕ್ಕೆ ಕೈ ಹಾಕಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜನ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಜನಜಂಗುಳಿಯ ಪ್ರದೇಶದಲ್ಲೇ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ
ವೀಡಿಯೋದಲ್ಲಿ ಕಾಣುವಂತೆ ಸಿಹಿತಿನಿಸಿನ ಅಂಗಡಿ ಮುಂದೆ ನೀಲಿ ಸೀರೆಯುಟ್ಟುಕೊಂಡಿರುವ ಮಹಿಳೆಯೊಬ್ಬರು ನಿಂತಿದ್ದು, ಈ ವೇಳೆ ಎದುರಿನಿಂದ ಬಂದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಮಹಿಳೆ ಗಾಬರಿಯಾಗಿದ್ದು, ಪಕ್ಕಕ್ಕೆ ಸರಿದಿದ್ದಾರೆ. ಆದರೆ ಆತ ಸೀದಾ ಅಂಗಡಿಯೊಳಗೆ ಹೋಗಿದ್ದಾನೆ. ವರದಿಗಳ ಪ್ರಕಾರ, ಈ ಘಟನೆ ಭಾನುವಾರ ಸಂಜೆ ಪ್ರಸಿದ್ಧ ರಾಜಸ್ಥಾನದ ಮಿಶ್ತಾನ್ ಭಂಡಾರ್ ಅಂಗಡಿಯ ಹೊರಗೆ ನಡೆದಿದ್ದು, ಹೀಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಗೌತಮ್ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಹೀಗೆ ಅಸಭ್ಯವಾಗಿ ಮುಟ್ಟಿದ್ದನ್ನು ನೋಡಿದ ಸಾರ್ವಜನಿಕರು ಆತನಿಗೆ ಸರಿಯಾಗಿ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ರಾಜಸ್ಥಾನದ ಜೈಪುರದ ಜನನಿಬಿಡ ಸಿಹಿತಿಂಡಿ ಅಂಗಡಿಯ ಹೊರಗೆ ಈ ಘಟನೆ ನಡೆದಿದೆ. ಸಾರ್ವಜನಿಕ ಅದರಲ್ಲೂ ಜನರು ಓಡಾಡುತ್ತಿರುವ ಸ್ಥಳದಲ್ಲೇ ಹಾಡಹಗಲೇ ಹೀಗೆ ವರ್ತಿಸಿದ ವ್ಯಕ್ತಿಯ ಭಂಡ ಧೈರ್ಯ ನೋಡಿದ ಜನ ಆತನಿಗೆ ಬೆನ್ನು ಹುಡಿಯಾಗುವಂತೆ ಬಾರಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿಯು ಕೌಂಟರ್‌ನಲ್ಲಿ ನಿಂತಿದ್ದ ಮಹಿಳೆಯನ್ನು ಅನುಚಿತವಾಗಿ ಮುಟ್ಟಲು ಪ್ರಯತ್ನಿಸಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕೃತ್ಯ ನೋಡಿ ಒಂದು ಕ್ಷಣ ದಂಗಾದ ಮಹಿಳೆ ನಂತರ ತಕ್ಷಣವೇ ಅಲ್ಲಿದ್ದವವರಿಗೆ ವಿಚಾರ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಂಗಡಿಯಲ್ಲಿದ್ದ ಗ್ರಾಹಕರು ಗೌತಮ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವರದಿಗಳ ಪ್ರಕಾರ, ಪೊಲೀಸರು ಗೌತಮ್ ವಿರುದ್ಧ ಪೋಕ್ಸೋ ಮತ್ತು ಕಿರುಕುಳ ತಡೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಡಹಗಲೇ ಈತನ ವರ್ತನೆಯಿಂದ ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದು, ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: 2 ವರ್ಷದ ಕಂದನನ್ನು ನೆಂಟರ ಮನೆಯಲ್ಲಿ ಬಿಟ್ಟು ಬಂದು ಸಾವಿಗೆ ಶರಣಾದ ದಂಪತಿ
ಇದನ್ನೂ ಓದಿ: ವರ್ಗಾವಣೆಗೊಂಡ ಡಿಸಿಗೆ ಭಾವಪೂರ್ಣ ವಿದಾಯ: ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬೀಳ್ಕೊಟ್ಟ ಸಿಬ್ಬಂದಿ
