ವರ್ಗಾವಣೆಗೊಂಡ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ಅಲ್ಲಿನ ಜನ ಬಹಳ ಭಾವಪೂರ್ಣವಾದ ಹಾಗೂ ವಿಭಿನ್ನವಾದ ವಿದಾಯ ಕೂಟವನ್ನು ಏರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರ್ಗಾವಣೆಗೊಂಡ ಜಿಲ್ಲಾಧಿಕಾರಿಗೆ ಭಾವಪೂರ್ಣ ವಿದಾಯ

ಸಿಯೋನಿ: ವರ್ಗಾವಣೆಗೊಂಡ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ಅಲ್ಲಿನ ಜನ ಬಹಳ ಭಾವಪೂರ್ಣವಾದ ಹಾಗೂ ವಿಭಿನ್ನವಾದ ವಿದಾಯ ಕೂಟವನ್ನು ಏರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸಂಸ್ಕೃತಿ ಜೈನ್ ಅವರನ್ನು ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತುಕೊಂಡು ಹೋಗುವ ಮೂಲಕ ವಿಶಿಷ್ಟವಾಗಿ ಬೀಳ್ಕೊಡಲಾಯ್ತು. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಪಲ್ಲಕ್ಕಿ ಮೇಲೆ ಜಿಲ್ಲಾಧಿಕಾರಿ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಕುಳಿತಿದ್ದರೆ, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಲ್ಲಕ್ಕಿಗೆ ಹೆಗಲು ಕೊಟ್ಟು ಅವರನ್ನು ಹೊತ್ತೊಯ್ದರು. ಜೊತೆಗೆ ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.

 ಪಲ್ಲಕ್ಕಿಯಲ್ಲಿ ಕರೆದೊಯ್ದು ಬೀಳ್ಕೊಟ್ಟ ಸಿಬ್ಬಂದಿ

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸ್ಕೃತಿ ಜೈನ್ ಅವರ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಮೆರವಣಿಗೆಯ ಸಮಯದಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದರಿಂದ ಬೀಳ್ಕೊಡುಗೆ ಸಮಾರಂಭವು ಇನ್ನಷ್ಟು ಭಾವುಕವಾಯ್ತು. ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಸಂಸ್ಕೃತಿ ಜೈನ್ ಅವರನ್ನು ಸಹ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಇದು ಜಿಲ್ಲೆಯಲ್ಲಿ ಅವರ ಅಧಿಕಾರಾವಧಿಯಲ್ಲಿ ಅವರು ನಡೆಸಿದ ಕಾರ್ಯಗಳು ಹಾಗೂ ಇತರ ಅಧಿಕಾರಿಗಳ ಜೊತೆ ಹೊಂದಿದ್ದ ಸಹಕಾರಕ್ಕೆ ಸಾಕ್ಷಿಯಾಗಿದೆ.

ಅನೇಕ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಿದರು. ಸಂಸ್ಕೃತಿ ಜೈನ್ ಅವರು ಭೋಪಾಲ್‌ನಲ್ಲಿ ಹೊಸ ಹುದ್ದೆಗೆ ವರ್ಗಾವಣೆಗೊಂಡಿದ್ದು, ಅಲ್ಲಿ ಅವರು ಯಶಸ್ಸು ಸಾಧಿಸಲಿ ಎಂದು ಸಿಬ್ಬಂದಿ ಹಾರೈಸಿದರು.

ಸಿಯೋನಿಯಲ್ಲಿ ಅವರ ಅಧಿಕಾರಾವಧಿಯಲ್ಲಿ ಸಂಸ್ಕೃತಿ ಜೈನ್ ಅವರ ಸಮರ್ಪಣೀಯ ಕಾರ್ಯಗಳು ಹಾಗೂ ಜಿಲ್ಲಾಡಳಿತ ಮತ್ತು ಅಲ್ಲಿನ ನಿವಾಸಿಗಳೊಂದಿಗೆ ನಿಕಟ ಬಾಂಧವ್ಯಕ್ಕಾಗಿ ಅವರು ಮೆಚ್ಚುಗೆ ಗಳಿಸಿದ್ದಾರೆ. ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಬ್ಬಂದಿ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ಇದು ಸಂಸ್ಕೃತಿ ಜೈನ್ ಅವರು ಸಿಯೋನಿಯಲ್ಲಿ ತಮ್ಮ ತಂಡದೊಂದಿಗೆ ಹಂಚಿಕೊಂಡ ಬಲವಾದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ನೆಟ್ಟಿಗರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಕಠಿಣ ಪರಿಶ್ರಮಿ ಅಧಿಕಾರಿಯ ಮೇಲಿನ ಗೌರವ ಮತ್ತು ವಾತ್ಸಲ್ಯದ ಸುಂದರ ಉದಾಹರಣೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸ್ಕೃತಿ ಜೈನ್ ಅವರು ತಮ್ಮ ಮುಂದಿನ ಕಾರ್ಯಕ್ಕಾಗಿ ಸಿಯೋನಿಯಿಂದ ಹೊರಡುವಾಗ, ಜಿಲ್ಲಾ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವೀಡಿಯೋ ನೋಡಿದ ನೆಟ್ಟಿಗರು ನೀವು ಒಬ್ಬರ ಹೃದಯ ಗೆದ್ದಾಗ ಇಂತಹ ಘಟನೆಗಳು ನಡೆಯುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಅವರು ನಿಜವಾಗಿಯೂ ಒಳ್ಳೆಯ ಹೃದಯದವರೇ ಇರಬೇಕು ಇಲ್ಲದೇ ಹೋದರೆ ಅಲ್ಲಿನ ಸಿಬ್ಬಂದಿ ಇವರು ಬೇಗ ಹೊರಟು ಹೋಗಲಿ ಎಂದು ಹಾರೈಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ಡ್ರೋನ್ ಚಾಲಿತ ಸುಡ್ಡುಮದ್ದು ಪ್ರದರ್ಶನದಲ್ಲಿ ಎಡವಟ್ಟು: ಪ್ರೇಕ್ಷಕರ ಮೇಲೆ ಬೆಂಕಿಮಳೆ

ಇದನ್ನೂ ಓದಿ: ನನ್ನ ಗರ್ಲ್‌ಫ್ರೆಂಡ್ ಆಗು: ಬೀದಿಯಲ್ಲಿ ಹೋಗ್ತಿದ್ದ ಮಹಿಳೆಯ ಎಳೆದಾಡಿದ ಯುವಕ

View post on Instagram