ದೀದಿ ಕ್ಲೀನ್‌ ಬೌಲ್ಡ್‌, ಟಿಎಂಸಿ ಆಲೌಟ್‌: ಮೋದಿ ವ್ಯಂಗ್ಯ| ಮೊದಲ 4 ಹಂತದಲ್ಲೇ ಬಿಜೆಪಿ ಸೆಂಚುರಿ| ಕ್ರಿಕೆಟ್‌ ಭಾಷೆಯಲ್ಲೇ ಮಮತಾಗೆ ಗುದ್ದು| ಪರಿಶಿಷ್ಟರನ್ನು ಟಿಎಂಸಿ ನಾಯಕ ಭಿಕ್ಷುಕರು ಎಂದಿದ್ದಾರೆ| ಇದು ಅಂಬೇಡ್ಕರರಿಗೆ ಮಾಡಿದ ಅವಮಾನ: ಪ್ರಧಾನಿ

ಬರ್ಧಮಾನ್‌ (ಏ.13): ‘ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷವು ಕ್ರಿಕೆಟ್‌ ಪಂದ್ಯದ ಅರ್ಧಕ್ಕೇ ಆಲೌಟ್‌ ಆಗಿದೆ. ‘ದೀದಿ’ ಅವರು ಕ್ಲೀನ್‌ ಬೌಲ್ಡ್‌ ಆಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್‌ ಭಾಷೆಯಲ್ಲೇ ಮಮತಾರನ್ನು ಕಿಚಾಯಿಸಿದ್ದಾರೆ.

ಬಂಗಾಳದ 5ನೇ ಚರಣದ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬರ್ಧಮಾನ್‌ನಲ್ಲಿ ಬಿಜೆಪಿ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಬಂಗಾಳದ ಜನರು ಈಗಾಗಲೇ ಮೊದಲ 4 ಹಂತದಲ್ಲಿ ಸಾಕಷ್ಟುಸಿಕ್ಸರ್‌ ಹಾಗೂ ಬೌಂಡರಿಗಳನ್ನು ಬಾರಿಸಿದ್ದಾರೆ. ಬಿಜೆಪಿ ಈಗಾಗಲೇ ಶತಕ (ಸೀಟುಗಳು) ದಾಟಿದೆ. ಆದರೆ ತೃಣಮೂಲ ಕಾಂಗ್ರೆಸ್‌ ಪಕ್ಷ ಅರ್ಧಕ್ಕೇ ಆಲ್‌ಔಟ್‌ ಆಗಿ ಪಂದ್ಯದಿಂದ ಹೊರಬಿದ್ದಿದೆ’ ಎಂದು ಛೇಡಿಸಿದರು.

‘ಬಂಗಾಳದ ಜನರು ನಂದಿಗ್ರಾಮದಲ್ಲಿ ದೀದಿಯನ್ನು ಕ್ಲೀನ್‌ಬೌಲ್ಡ್‌ ಮಾಡಿ ಮೈದಾನ ಬಿಟ್ಟು ಹೊರಡಲು ಇಡೀ ತಂಡಕ್ಕೆ ಸೂಚಿಸಿದ್ದಾರೆ’ ಎಂದೂ ಅವರು ವ್ಯಂಗ್ಯವಾಡಿದರು.

ಇದೇ ವೇಳೆ, ‘ಪರಿಶಿಷ್ಟಜಾತಿಯ ಜನರನ್ನು ತೃಣಮೂಲ ಕಾಂಗ್ರೆಸ್‌ ನಾಯಕರೊಬ್ಬರು ‘ಭಿಕ್ಷುಕರು’ ಎಂದು ಕರೆದಿದ್ದಾರೆ. ಇದಕ್ಕೆ ವಿಷಾದ ವ್ಯಕ್ತಪಡಿಸುವ ಕನಿಷ್ಠ ಸೌಜನ್ಯವೂ ಮಮತಾಗಿಲ್ಲ. ಬಂಗಾಳದ ಹುಲಿ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ದೀದಿ ಅನುಮತಿ ಇಲ್ಲದೇ ಇಂಥ ಹೇಳಿಕೆ ಬರಲು ಸಾಧ್ಯವೇ ಇಲ್ಲ. ಇದು ಬಾಬಾಸಾಹೇಬ್‌ ಅಂಬೇಡ್ಕರರಿಗೆ ಮಾಡಿದ ದೊಡ್ಡ ಅವಮಾನ’ ಎಂದು ಮೋದಿ ಕಿಡಿಕಾರಿದರು.

‘ಅರೇ ಓ ದೀದಿ.. ನಾನು ಇಲ್ಲೇ ಇದ್ದೇನೆ. ಸಿಟ್ಟನ್ನು ಬೇಕಿದ್ದರೆ ನನ್ನ ಮೇಲೆ ತೋರಿಸಿ. ಆದರೆ ಬಂಗಾಳದ ಸಂಪ್ರದಾಯ ಹಾಗೂ ಗೌರವಕ್ಕೆ ಅವಮಾನ ಮಾಡಬೇಡಿ’ ಎಂದರು.