ಭಾರತದ ಜೊತೆಗಿನ ಸಂಬಂಧ ಹಳಸಿದ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಮಾಲ್ಡೀವ್ಸ್‌, ಇದೀಗ ಭಾರತೀಯರ ಸೆಳೆಯಲು ಭಾರತದಲ್ಲಿ ರೋಡ್‌ ಶೋ ನಡೆಸಲು ನಿರ್ಧರಿಸಿದೆ.

ಮಾಲೆ: ಭಾರತದ ಜೊತೆಗಿನ ಸಂಬಂಧ ಹಳಸಿದ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಮಾಲ್ಡೀವ್ಸ್‌, ಇದೀಗ ಭಾರತೀಯರ ಸೆಳೆಯಲು ಭಾರತದಲ್ಲಿ ರೋಡ್‌ ಶೋ ನಡೆಸಲು ನಿರ್ಧರಿಸಿದೆ.

ಇದಕ್ಕಾಗಿ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನರ್‌ ಕಚೇರಿಯಲ್ಲಿ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘ ಸಭೆ ನಡೆಸಿದೆ. ಭಾರತೀಯ ನಗರಗಳಲ್ಲಿ ರೋಡ್‌ ಷೋ ನಡೆಸಿ ಸಾಮಾಜಿಕ ಜಾಲತಾಣಗಳ ‘ಇನ್ಸ್‌ಫ್ಲೂಯೆನ್ಸರ್‌’ಗಳನ್ನು ಬಳಸಿ ಅವರ ಮುಖಾಂತರ ಮಾಲ್ಡೀವ್ಸ್‌ಗೆ ಪ್ರವಾಸಿಗರನ್ನು ಸೆಳೆಯುವ ಯತ್ನಕ್ಕೆ ಮಾಲ್ಡೀವ್ಸ್‌ ಮುಂದಾಗಿದೆ.

ಭಾರತೀಯ ಪ್ರವಾಸಿಗರ ಇಳಿಮುಖಕ್ಕೆ ಕಾರಣವೇನು?

ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಮುಹಮ್ಮದ್‌ ಮುಯಿಜು ಅಧ್ಯಕ್ಷರಾದ ಬಳಿಕ ಅಲ್ಲಿನ ಭಾರತೀಯ ಪಡೆಗಳಿಗೆ ವಾಪಾಸ್‌ಗೆ ಸೂಚಿಸಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಪ್ರವಾಸ ಕೈಗೊಂಡು ಅಲ್ಲಿಗೆ ಭೇಟಿ ನೀಡುವಂತೆ ಕರೆ ಕೊಟ್ಟ ಬೆನ್ನಲ್ಲೇ ಅದಕ್ಕೆ ಮಾಲ್ಡೀವಸ್‌ ಸಚಿವರು ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಆರನೇ ಸ್ಥಾನಕ್ಕೆ ಕುಸಿದಿತ್ತು.

News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

ಯಾವ ದೇಶದಿಂದ ಎಷ್ಟು ಪ್ರವಾಸಿಗರು?

ಪ್ರಸ್ತುತ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಚೀನಾ 71,995 ಪ್ರವಾಸಿಗರೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ನಂತರದಲ್ಲಿ ಬ್ರಿಟನ್‌ (66,999), ರಷ್ಯಾ (66,803), ಇಟಲಿ (61,379), ಜರ್ಮನಿ (52,256) ದೇಶಗಳಿವೆ. ಭಾರತ 37,417 ಪ್ರವಾಸಿಗರೊಂದಿಗೆ 6ನೇ ಸ್ಥಾನದಲ್ಲಿದೆ.