ಒಂದೇ ದಿನ 2,700 ಪ್ರಕರಣ ದಾಖಲು, ಆರೋಗ್ಯ ಇಲಾಖೆ ಎಚ್ಚರಿಕೆ ಫೆಬ್ರವರಿ ಬಳಿಕ ಮತ್ತೆ ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ಜೂನ್ ತಿಂಗಳ ಆರಂಭದಿಂದ ಗಣನೀಯ ಏರಿಕೆ
ಮುಂಬೈ(ಜೂ.08): ಭಾರತದ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಈ ಬಾರಿಯೂ ಮಹಾರಾಷ್ಟ್ರ ಹಾಗೂ ಮುಂಬೈ ಮತ್ತೊಂದು ಕೊರೋನಾ ಅಲೆಗೆ ಕಾರಣವಾಗಲಿದೆಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. 4 ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ಒಂದೇ ದಿನ 2,701 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಅದೃಷ್ಟವಶಾತ್ ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಕೋವಿಡ್ ಪ್ರಕರಣ ಹೆಚ್ಚಳವಾಗಿರುವ ಕಾರಣ ಸಕ್ರೀಯ ಪ್ರಕರಣ ಸಂಖ್ಯೆ 10,000ಕ್ಕೆ ಏರಿಕೆಯಾಗಿದೆ. ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ 2,797 ಕೋವಿಡ್ ಪ್ರಕರಣ ದಾಖಲಾಗಿತ್ತು.
ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಲಕ್ಷಣ ಇಲ್ಲ, ಪರೀಕ್ಷೆ ಹೆಚ್ಚಳದಿಂದಾಗಿ ಸೋಂಕು ಹೆಚ್ಚಳ!
ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 78,98,815ಕ್ಕೆ ಏರಿಕೆಯಾಗಿದೆ. ಬುಧವಾರ 2,701 ಪ್ರಕರಣ ಪತ್ತೆಯಾಗಿದ್ದರೆ, ಮಂಗಳವಾರ 1,881 ಪ್ರಕರಣ ಪತ್ತೆಯಾಗಿತ್ತು. ಇನ್ನು ಮುಂಬೈ ಮಹಾನಗರ ಒಂದರಲ್ಲೇ ಕಳೆದ 24 ಗಂಟೆಯಲ್ಲಿ 1,765 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಪೈಕಿ ಬಹುಪಾಲು ಮುಂಬೈನಲ್ಲೇ ವರದಿಯಾಗಿದೆ. ಜನವರಿ ತಿಂಗಳ ಬಳಿಕ ಮುಂಬೈನಲ್ಲಿ ದಾಖಲಾಗಿರುವ ಗರಿಷ್ಠ ಪ್ರಕರಣ ಇದಾಗಿದೆ.
ಕರ್ನಾಟಕದಲ್ಲೂ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಕರ್ನಾಟಕ, ಮಹಾರಾಷ್ಯ್ರ ಸೇರಿ 5 ರಾಜ್ಯಗಳಿಗೆ ಎಚ್ಚರಿಕೆ ಪತ್ರ ರವಾನಿಸಿತ್ತು. ಕರ್ನಾಟಕದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ ನಿಜ. ಆದರೆ ಆಸ್ಪತ್ರೆ ದಾಖಲಾಗುವ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಹೀಗಾಗಿ ಕರ್ನಾಟಕದಲ್ಲಿ ನಾಲ್ಕನೇ ಅಲೆ ಭೀತಿ ಇಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಕೋವಿಡ್ ಕಾಣಿಸಿಕೊಂಡಿರುವ ಹಲವರು ಅತ್ಯಲ್ಪ ದಿನದಲ್ಲೇ ಗುಣಮುಖರಾಗಿದ್ದರೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಮಧ್ಯೆನೇ ನೊರೋ ವೈರಸ್ ಆತಂಕ, ಇದು ಕೋವಿಡ್‌ನಂತೆಯೇ ಮಾರಣಾಂತಿಕವೇ ?
ಕೋವಿಡ್‌ನಿಂದ ಸಚಿವ ಸುಧಾಕರ್ ಗುಣಮುಖ
ಕೊರೋನಾ ಸೋಂಕಿಗೀಡಾಗಿದ್ದ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗುಣಮುಖರಾಗಿದ್ದಾರೆ. ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ‘ಕೊರೋನಾ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿದ್ದು, ನಾನು ಮೊದಲಿನಂತೆ ಸಕ್ರಿಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ಹಾರೈಕೆಗಳಿಗೆ ನಾನು ಚಿರಋುಣಿ’ ಎಂದಿದ್ದಾರೆ. ಕೊರೋನಾ ಮೊದಲೆರಡು ಅಲೆಗಳಲ್ಲಿಯೂ ಸೋಂಕಿನಿಂದ ಪಾರಾಗಿದ್ದೆ. ಈಗ ಸೋಂಕಿತನಾಗಿದ್ದೇನೆ ಎಂದು ಜೂ.2ರಂದು ಸಚಿವರು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್‌ನಲ್ಲಿದ್ದರು.
ಬೆಂಗಳೂರಲ್ಲಿ ಕೊರೋನಾ ಪ್ರಕರಣ ಏರಿಕೆ
ನಗರದಲ್ಲಿ 291 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಫೆ.26 ರಂದು 345 ಮಂದಿ ಸೋಂಕಿತರು ಪತ್ತೆಯಾದ ಬಳಿಕ ಮೊದಲ ಬಾರಿಗೆ 300ರ ಅಸುಪಾಸಿನಲ್ಲಿ ಹೊಸ ಪ್ರಕರಣ ವರದಿಯಾಗಿದೆ. ಮೇ 18ರ ಬಳಿಕ ಕೋವಿಡ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ನಗರದ 72 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ. 142 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 2,294 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 4 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 17 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.
