ಮುಂಬೈ[ಮಾ.17]: ಮಹಾರಾಷ್ಟ್ರ ಸರ್ಕಾರ ಕೊರೋನಾ ಶಂಕೆಯಿಂದ ಮನೆಯಲ್ಲೇ ಪ್ರತ್ಯೇಕಗೊಳ್ಳುವವರ ಎಡಗೈ ಮೇಲೆ ಸೀಲಿನ ಗುರುತು ಹಾಕಲು ನಿರ್ಧರಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಜನ ಸಾಮಾನ್ಯರು ಕೊರೋನಾ ಕುರಿತಾಗಿ ತಮಗಿರುವ ಅಂಜಿಕೆ, ಆತಂಕ ಹಾಗೂ ಸಮಸ್ಯೆಗಳ ಕುರಿತಾಗಿ ಪರಿಹಾರ ಪಡೆಯಲು ಸಮಸ್ಯೆ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದಲ್ಲಿ, ಗದ್ದಲ-ಗೊಂದಲ ಏರ್ಪಡುತ್ತದೆ.

ಕೊರೋನಾ ವೈರಸ್: ಭಾರತ ತಲ್ಲಣ, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೀಗಾಗಿ, ಜನ ಸಾಮಾನ್ಯರು ತಮ್ಮ ಕುಂದು-ಕೊರತೆಗಳನ್ನು ಇ-ಮೇಲ್‌ಗಳ ಮೂಲಕ ಹಂಚಿಕೊಳ್ಳಿ ಎಂದು ತಿಳಿಸಲಾಗಿದೆ.

ಕೈದಿಗಳ ಬಗ್ಗೆ ಸುಪ್ರೀಂ ಕಳವಳ

ದೇಶಾದ್ಯಂತ 114 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿರುವ ಬೆನ್ನಲ್ಲೇ, ದೇಶದೆಲ್ಲೆಡೆ ಜೈಲುಗಳಲ್ಲಿರುವ ಭಾರೀ ಸಂಖ್ಯೆಯ ಕೈದಿಗಳ ಸ್ಥಿತಿಗತಿ ಬಗ್ಗೆ ಸುಪ್ರೀಂಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. 1339 ಜೈಲುಗಳಲ್ಲಿ 4,66,084 ಮಂದಿ ಸೆರೆವಾಸ ಅನುಭವಿಸುತ್ತಿದ್ದಾರೆ. ಒಂದು ವೇಳೆ ಕೊರೋನಾ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಭಾರತದಲ್ಲಿನ ಪರಿಸ್ಥಿತಿ ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಮಾ.23ರಂದು ಈ ಬಗ್ಗೆ ಮತ್ತೆ ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿದೆ.

ಇರಾನ್‌ನಿಂದ 53 ಜನ ಭಾರತಕ್ಕೆ

ಅತಿಹೆಚ್ಚು ಕೊರೋನಾ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾನ್‌ನಿಂದ ಮತ್ತೆ 53 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ತನ್ಮೂಲಕ ಇರಾನ್‌ನಿಂದ ಇದುವರೆಗೂ ಒಟ್ಟು 389 ಭಾರತೀಯ ನಾಗರಿಕರ ರಕ್ಷಣೆ ಮಾಡಿದಂತಾಗಿದೆ. ಸೋಮವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ 53 ಮಂದಿಯನ್ನು ಆ ನಂತರ ರಾಜಸ್ಥಾನದ ಜೈಸಲ್ಮೇರ್‌ಗೆ ಏರ್‌ ಇಂಡಿಯಾ ವಿಮಾನದಲ್ಲಿ ರವಾನಿಸಲಾಯಿತು. ಅವರನ್ನು ಇಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಪರೀಕ್ಷೆ ನಡೆಸಲಾಗುತ್ತದೆ.