ಮಹಾರಾಷ್ಟ್ರ ಬೆದರಿಕೆ; ಕರ್ನಾಟಕ ಸೇರಲ್ಲ ಎಂದ 10 ಮಹಾ ಗ್ರಾಮಗಳು!
- ಕರ್ನಾಟಕ ಸೇರಲ್ಲ ಎಂದ 10 ಮಹಾ ಗ್ರಾಮಗಳು
- ಮಹಾ ಸರ್ಕಾರದ ನೋಟಿಸ್ ಬೆನ್ನಲ್ಲೇ ಉಲ್ಟಾಹೊಡೆದ ಅಕ್ಕಲಕೋಟೆ ಗ್ರಾಮಗಳು
- ಮಹಾರಾಷ್ಟ್ರದಲ್ಲೇ ಇರ್ತೇವೆ: ಸರ್ಕಾರಕ್ಕೆ ಮಾಹಿತಿ
- ಇನ್ನೂ ನಿರ್ಣಯ ಕೈಗೊಳ್ಳದ 11ನೇ ಗ್ರಾಪಂ
ಪುಣೆ (ಡಿ.15): ಕರ್ನಾಟಕ ಸೇರಲು ಬಯಸಿ ಸಂಚಲನ ಮೂಡಿಸಿದ್ದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ 11 ಗ್ರಾಮಗಳ ಪೈಕಿ 10 ಗ್ರಾಮಗಳು ಬುಧವಾರ ನಿಲುವು ಬದಲಿಸಿವೆ. ಮಹಾರಾಷ್ಟ್ರದಲ್ಲೇ ಉಳಿದುಕೊಳ್ಳುವುದಾಗಿ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರ ಈ ಗ್ರಾಮಗಳಿಗೆ ನೋಟಿಸ್ ನೀಡಿ ಪರೋಕ್ಷ ಬೆದರಿಕೆ ಹಾಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇತ್ತೀಚೆಗೆ 11 ಹಳ್ಳಿಗಳು ಮಹಾರಾಷ್ಟ್ರದಲ್ಲಿ ತಮಗೆ ಸೂಕ್ತ ಸವಲತ್ತುಗಳು ಸಿಗುತ್ತಿಲ್ಲ. ಹೀಗಾಗಿ ಕರ್ನಾಟಕ ಸೇರುತ್ತೇವೆ ಎಂದು ಬೆಳಗಾವಿ ಗಡಿ ವಿವಾದ ಭುಗಿಲೆದ್ದ ನಡುವೆÜಯೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಠರಾವು ಕೈಗೊಂಡಿದ್ದವು. ಈ ಹಳ್ಳಿಗಳ ಠರಾವಿಗೆ ಮಹಾರಾಷ್ಟ್ರದಲ್ಲಿ ಆಕ್ರೋಶ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಸ್ವಾಗತ ವ್ಯಕ್ತವಾಗಿತ್ತು.
ಬೆಳಗಾವಿ ಗಡಿ ವಿವಾದ ಸಭೆ ಬಳಿಕ ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮತ್ತೊಂದು ಸುತ್ತಿನ ಮಾತುಕತೆ!
ಇದರ ಬೆನ್ನಲ್ಲೇ ಈ ಗ್ರಾಮ ಪಂಚಾಯ್ತಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಮಹಾರಾಷ್ಟ್ರ ಸರ್ಕಾರ, ಗ್ರಾಮ ಪಂಚಾಯ್ತಿಗಳ ಸೂಪರ್ ಸೀಡ್ ಎಚ್ಚರಿಕೆ ನೀಡಿತ್ತು. ‘ಮಹಾರಾಷ್ಟ್ರ ಸರ್ಕಾರ ಎಲ್ಲ ಸವಲತ್ತುಗಳನ್ನು ಹಳ್ಳಿಗಳಿಗೆ ನೀಡುತ್ತಿದೆ. ಇವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಬದಲು ಏಕೆ ಇಂಥ ಕ್ರಮ ಕೈಗೊಂಡಿದ್ದೀರಿ?’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿತ್ತು.
‘ನೋಟಿಸ್‌ಗೆ ಮಂಗಳವಾರ ಉತ್ತರ ನೀಡಿರುವ ಅಕ್ಕಲಕೋಟ ತಾಲೂಕಿನ 10 ಹಳ್ಳಿಗಳು, ತಾವು ಠರಾವು ರದ್ದುಗೊಳಿಸಿದ್ದಾಗಿ ಹೇಳಿವೆ ಹಾಗೂ ಮಹಾರಾಷ್ಟ್ರದಲ್ಲೇ ಉಳಿದುಕೊಳ್ಳುವುದಾಗಿ ತಿಳಿಸಿವೆ. 11ನೇ ಹಳ್ಳಿಯ ಸರಪಂಚ ಊರಲ್ಲಿಲ್ಲ. ಹೀಗಾಗಿ ಇನ್ನೂ ಅಲ್ಲಿ ನಿರ್ಣಯ ಕೈಗೊಂಡಿಲ್ಲ ಎಂದು ತಿಳಿಸಲಾಗಿದೆ’ ಎಂದು ಅಕ್ಕಲಕೋಟ ಉಪವಿಭಾಗಾಧಿಕಾರಿ ಸಚಿನ್ ಖುಡೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ 11ನೇ ಗ್ರಾ.ಪಂ. ಅಧ್ಯಕ್ಷ ಹಟೂರೆ, ‘ಸೂಪರ್‌ಸೀಡ್‌ಗೆ ಹೆದರಿ 10 ಗ್ರಾಪಂಗಳು ಠರಾವು ರದ್ದು ಮಾಡಿವೆ. ಆದರೆ ನಾವಿನ್ನೂ ವಕೀಲರ ಜತೆ ಚರ್ಚಿಸುತ್ತಿದ್ದೇವೆ’ ಎಂದಿದ್ದಾರೆ.
ದೆಹಲಿಯಲ್ಲಿಂದು ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಧಾನ ಸಭೆ..!
ಆದರೆ ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿಅವರು, ‘ಎಲ್ಲ 11 ಗ್ರಾ.ಪಂ.ಗಳೂ ಠರಾವು ರದ್ದು ಮಾಡಿವೆ. ಎಲ್ಲ ಹಳ್ಳಿಗಳಿಗೆ ನಾನು ಭೇಟಿ ನೀಡಿ ಸರ್ಕಾರದ ಸವಲತ್ತುಗಳ ಬಗ್ಗೆ ವಿವರಿಸಿದೆ. ಯಾವ ಸರಪಂಚನೂ ಆಕ್ಷೇಪ ಎತ್ತಲಿಲ್ಲ. ಎಲ್ಲರೂ ಕರ್ನಾಟಕ ಸೇರುವ ನಿಲುವಿನಿಂದ ಹಿಂದೆ ಸರಿಯುವುದಾಗಿ ತಿಳಿಸಿದರು’ ಎಂದಿದ್ದಾರೆ.