ಬೆಳಗಾವಿ ಗಡಿ ವಿವಾದ ಸಭೆ ಬಳಿಕ ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮತ್ತೊಂದು ಸುತ್ತಿನ ಮಾತುಕತೆ!
ಬೆಳಗಾವಿ ಗಡಿ ವಿವಾದ ಸಭೆ ಅಂತ್ಯಗೊಂಡ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ನವದೆಹಲಿ(ಡಿ.14): ಬೆಳಗಾವಿ ಗಡಿ ವಿಚಾರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದೀಗ ರಾಜ್ಯ ವಿದ್ಯಮಾನ ಸೇರಿದಂತೆ ಹಲವು ವಿಷಗಳ ಕುರಿತು ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ತೊಡಗಿದ್ದಾರೆ. ಬೆಳಗಾವಿ ಗಡಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದರು. ಅಮಿತ್ ಶಾ ಮಾತು ಮುಗಿಸಿದ ಬಳಿಕ ಮತ್ತೆ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಜ್ಯದ ತಂಡ ಗೃಹ ಸಚಿವರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ.
ಬೊಮ್ಮಾಯಿ ಜೊತೆ, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಕಾರಜೋಳ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರಾಜ್ಯದ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನು ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಪುಟ ಕುರಿತು ಮಾತನಾಡಲು ಮತ್ತೊಂದು ಸಭೆ ನಿಗದಿಪಡಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ, ಶಿಂಧೆ ಜೊತೆಯಲ್ಲಿ ಶಾ ಸುದ್ದಿಗೋಷ್ಠಿ, ರಾಜಕೀಯ ಬೇಡ, ಕೋರ್ಟ್ ನಿರ್ಧಾರದ ಬಳಿಕ ಕ್ರಮ!
ಅಮಿತ್ ಶಾ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಬೊಮ್ಮಾಯಿ , 2004 ರಿಂದಲೂ ಗಡಿ ವಿವಾದ ನಡೆಯುತ್ತಿದೆ. ನಮ್ಮ ವಾದವನ್ನು ಅಮಿತ್ ಶಾ ಮುಂದೆ ಮಂಡಿಸಿದ್ದೇವೆ. ಅತ್ತ ಮಹಾರಾಷ್ಟ್ರ ಸಿಎಂ ಕೂಡ ಅವರ ಅಭಿಪ್ರಾಯ ತಿಳಿಸಿದ್ದಾರೆ. ಗಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯ ಸರ್ಕಾರ ಸಂವಿಧಾನಬದ್ಧವಾಗಿ ನಡೆದುಕೊಳ್ಳತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಸಮಸ್ಯೆ ಉದ್ಭವಿಸಿದೆ. ಎರಡೂ ರಾಜ್ಯದ ಸರ್ಕಾರಗಳು ಕುಳಿತು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಯನ್ನೊಳಗೊಂಡ ಸಮಿತಿ ರಚನೆಯಾಗಲಿದೆ. ಇನ್ನೂ ಎರಡೂ ರಾಜ್ಯಗಳಿಂದ ತಲಾ ಮೂವರು ಸಚಿವರ ಸಮಿತಿ ರಚಿಸಿ ಸಮಸ್ಯೆಗೆ ಪರಿಹಾರ ಹುಡುಕಲು ಗೃಹ ಸಚಿವರು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ತಾರಕಕ್ಕೇರಿದ ಗಡಿ ಸಮಸ್ಯೆ, ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ!
ಅಮಿತ್ ಶಾ ಸುದ್ದಿಗೋಷ್ಠಿ
ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಸದ್ಯ ರಾಜ್ಯಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಎರಡು ರಾಜ್ಯಗಳು ಗಡಿ ವಿಚಾರವನ್ನು ರಾಜಕೀಯ ಚರ್ಚಾ ವಿಷಯ ಮಾಡಬಾರದು ಎಂದು ಅಮಿತ್ ಶಾ ಮನವಿ ಮಾಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಯಾವುದೇ ರಾಜಕೀಯ ಮಾಡಬಾರದು ಎಂದು ವಿಪಕ್ಷಗಳಲ್ಲಿ ಅಮಿತ್ ಶಾ ಮನವಿ ಮಾಡಿದ್ದಾರೆ.
ಕರ್ನಾಟಕ ಸೇರಲ್ಲ ಎಂದ 10 ಮಹಾ ಗ್ರಾಮಗಳು
ಕರ್ನಾಟಕ ಸೇರಲು ಬಯಸಿ ಸಂಚಲನ ಮೂಡಿಸಿದ್ದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ 11 ಗ್ರಾಮಗಳ ಪೈಕಿ 10 ಗ್ರಾಮಗಳು ನಿಲುವು ಬದಲಿಸಿವೆ. ಮಹಾರಾಷ್ಟ್ರದಲ್ಲೇ ಉಳಿದುಕೊಳ್ಳುವುದಾಗಿ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರ ಈ ಗ್ರಾಮಗಳಿಗೆ ನೋಟಿಸ್ ನೀಡಿ ಪರೋಕ್ಷ ಬೆದರಿಕೆ ಹಾಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ 11 ಹಳ್ಳಿಗಳು ಮಹಾರಾಷ್ಟ್ರದಲ್ಲಿ ತಮಗೆ ಸೂಕ್ತ ಸವಲತ್ತುಗಳು ಸಿಗುತ್ತಿಲ್ಲ. ಹೀಗಾಗಿ ಕರ್ನಾಟಕ ಸೇರುತ್ತೇವೆ ಎಂದು ಬೆಳಗಾವಿ ಗಡಿ ವಿವಾದ ಭುಗಿಲೆದ್ದ ನಡುವೆಯೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಠರಾವು ಕೈಗೊಂಡಿದ್ದವು. ಈ ಹಳ್ಳಿಗಳ ಠರಾವಿಗೆ ಮಹಾರಾಷ್ಟ್ರದಲ್ಲಿ ಆಕ್ರೋಶ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಸ್ವಾಗತ ವ್ಯಕ್ತವಾಗಿತ್ತು.