ಮುಂಬೈ(ಮೇ.08): ಕೊರೋನಾ 3ನೇ ಅಲೆಯನ್ನು ಎದುರಿಸಲು ಈಗಿನಿಂದಲೇ ಪೂರ್ವ ಸಿದ್ಧತೆಗಳನ್ನು ಆರಭಿಸಿರುವ ಮಹಾರಾಷ್ಟ್ರ ಸರ್ಕಾರ ಮಕ್ಕಳ ಕೋವಿಡ್‌ ಸೆಂಟರ್‌ಗಳನ್ನು ಹಾಗೂ ಮಕ್ಕಳ ತಜ್ಞರ ಕಾರ್ಯಪಡೆಯನ್ನು ತೆರೆಯುವುದಕ್ಕೆ ಮುಂದಾಗಿದೆ.

‘ಕೊರೋನಾ 1ನೇ ಅಲೆಯಲ್ಲಿ ಹಿರಿಯ ವ್ಯಕ್ತಿಗಳು ಹೆಚ್ಚು ಬಾಧಿತರಾಗಿದ್ದರು. 2ನೇ ಅಲೆ ಯುವಕರನ್ನೂ ಬಾಧಿಸುತ್ತಿದೆ. ಆದರೆ, ಮೂರನೇ ಅಲೆಯು ಲಸಿಕೆ ಪಡೆಯಲು ಅವಕಾಶವಿಲ್ಲದ 18ಕ್ಕಿಂತ ಕೆಳಗಿನ ವರ್ಷದ ಮಕ್ಕಳಿಗೆ ಮಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಿನ್ನೆಲೆಯಲ್ಲಿ ನಾವು ಮಕ್ಕಳ ಕೋವಿಡ್‌ ಕೇಂದ್ರಗಳನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮಕ್ಕಳಿಗೆ ಭಿನ್ನ ವೆಂಟಿಲೇಟರ್‌ಗಳು ಹಾಗೂ ಇತರ ವೈದ್ಯಕೀಯ ಸಾಧನಗಳ ಅಗತ್ಯವಿದೆ’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

"

‘ಕೊರೋನಾ ಸೋಂಕು ತಗುಲಿದ ಮಕ್ಕಳು ತಾಯಿಯ ಜೊತೆಗೆ ಇರುವ ಅಗತ್ಯವಿದೆ ಮತ್ತು ಅವರ ಚಿಕಿತ್ಸೆಗೆ ತಜ್ಞ ಶಿಶು ವೈದ್ಯರ ಅಗತ್ಯಬೀಳಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ತಜ್ಞರ ಕಾರ್ಯಪಡೆಯನ್ನು ರಚಿಸಲಾಗುವುದು. ಕೊರೋನಾ 3ನೇ ಅಲೆ ಪುಟ್ಟಮಕ್ಕಳನ್ನೂ ಬಾಧಿಸಲಿದೆ. ಒಂದು ವೇಳೆ ಹೆಚ್ಚು ಮಂದಿ ಮಕ್ಕಳು ಕೊರೋನಾ ಸೋಂಕಿತರಾದರೆ ಅವರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅವರು ತಾಯಿಯ ಆರೈಕೆಯಲ್ಲೇ ಇರಬೇಕು. ಹೀಗಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಬಳಿ ಚರ್ಚೆ ನಡೆಸಲಾಗಿದೆ’ ಎಂದು ಟೋಪೆ ಹೇಳಿದ್ದಾರೆ.

ಮಕ್ಕಳ ಕೋವಿಡ್‌ ಸೆಂಟರ್‌ನಲ್ಲಿ ಏನಿರುತ್ತೆ?

- ಮಕ್ಕಳಿಗೆ ಭಿನ್ನ ವೆಂಟಿಲೇಟರ್‌, ಇತರ ವೈದ್ಯಕೀಯ ಸಾಧನ

- ಚಿಕ್ಕ ಮಕ್ಕಳ ಚಿಕಿತ್ಸೆಗೆ ನುರಿತ ಶಿಶು ತಜ್ಞರ ನಿಯೋಜನೆ

- ಮಕ್ಕಳ ಕಾರ್ಯಪಡೆಯಿಂದ ಮಕ್ಕಳಿಗೆ ಸಲಹೆ, ಆರೈಕೆ

- ಮಕ್ಕಳ ಜೊತೆಗೆ ತಾಯಂದಿರೂ ಇರಲು ಅವಕಾಶ?

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona