* ಶಿವಸೇನೆಯ 30ಕ್ಕೂ ಹೆಚ್ಚು ಶಾಸಕರು ಮುಂಬೈನಿಂದ ಗುಜರಾತ್‌ನ ಸೂರತ್‌ಗೆ* ‘ಕಾಯ್ತಾ ಇರಿ.. ಬಂದೆ’ ಎಂದು ಶಾಸಕರು ಗುಜರಾತ್‌ಗೆ ಪರಾರಿ!* ಭದ್ರತಾ ಸಿಬ್ಬಂದಿಗೇ ಚಳ್ಳೆಹಣ್ಣು ತಿನ್ನಿಸಿದ ಶಿವಸೇನೆ ಶಾಸಕರು

ಮುಂಬೈ(ಜೂ.26): ಮಹಾ ಅಘಾಡಿ ಸರ್ಕಾರದ ಹಿರಿಯ ನಾಯಕರಿಗೆ ಗೊತ್ತಾಗದಂತೆ ಶಿವಸೇನೆಯ 30ಕ್ಕೂ ಹೆಚ್ಚು ಶಾಸಕರು ಮುಂಬೈನಿಂದ ಗುಜರಾತ್‌ನ ಸೂರತ್‌ಗೆ ತೆರಳಿದ್ದು, ರಾಜ್ಯದ ಗುಪ್ತಚರ ಸಂಸ್ಥೆಗಳ ವೈಫಲ್ಯ ಎಂದೇ ಟೀಕಿಸಲಾಗಿತ್ತು. ಆದರೆ ಹೀಗೆ ಯಾರಿಗೂ ಗೊತ್ತಾಗದಂತೆ ಅಷ್ಟೊಂದು ಶಾಸಕರು ಮುಂಬೈನಿಂದ 280 ಕಿ.ಮೀ ದೂರದ ಸೂರತ್‌ಗೆ ಹೇಗೆ ತೆರಳಿದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಸೂರತ್‌ಗೆ ತೆರಳಿದ ಶಿವಸೇನೆ ಸಚಿವರು, ಶಾಸಕರು ರಾಜ್ಯ ಸರ್ಕಾರದಿಂದ ವಿವಿಧ ರೀತಿಯ ಭದ್ರತೆಗೆ ಒಳಪಟ್ಟಿದ್ದಾರೆ. ಅಂದರೆ ಇವರಿಗೆಲ್ಲಾ ಪೊಲೀಸರ ಭದ್ರತೆ ಒದಗಿಸಲಾಗಿದೆ. ಹೀಗಾಗಿ ಶಾಸಕರು, ಸಚಿವರ ಪ್ರತಿ ಚಲನವಲನ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ಬಂದೇ ಬರುತ್ತದೆ.

ಆದರೆ ವಿಧಾನ ಪರಿಷತ್‌ ಫಲಿತಾಂಶ ಪ್ರಕಟವಾದ ಜೂ.20ರ ರಾತ್ರಿ ಬಹುತೇಕ ಶಾಸಕರು, ತಮ್ಮ ಭದ್ರತಾ ಸಿಬ್ಬಂದಿಗೆ ‘ವೈಯಕ್ತಿಕ ಕಾರಣವಿದೆ. ಸ್ವಲ್ಪ ಸಮಯದಲ್ಲಿ ಬರುತ್ತೇನೆ ಕಾಯ್ತಾ ಇರಿ’ ಎಂದು ಹೇಳಿ ನಾಪತ್ತೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಮುಂಬೈನ ಶಾಸಕರೊಬ್ಬರು ತಮ್ಮ ಕಚೇರಿಯಲ್ಲಿ ಎಳನೀರು ಕುಡಿಯುತ್ತಾ ಆಪ್ತರೊಂದಿಗೆ ಕುಳಿತಿದ್ದು, ರಾತ್ರಿ ಏಕಾಏಕಿ 5 ನಿಮಿಷ ಹೊರಗೆ ಹೋಗಿ ಬರುತ್ತೇನೆ ಎಂದು ಭದ್ರತಾ ಸಿಬ್ಬಂದಿಗೆ ಹೇಳಿ ನಾಪತ್ತೆಯಾಗಿದ್ದಾರೆ. ಮತೊಬ್ಬ$ಶಾಸಕರು ಮನೆಯಲ್ಲಿ ಸ್ವಲ್ಪ ವೈಯಕ್ತಿಕ ಕೆಲಸ ಇದೆ. ಹೋಗಿ ಬರುವೆ ಎಂದು ಪರಾರಿಯಾಗಿದ್ದಾರೆ. ಇನ್ನೊಬ್ಬರು ತಮ್ಮ ಜೊತೆ ಇದ್ದ ಯುವ ಸೇನೆ ನಾಯಕರನ್ನು ಮಾರ್ಗಮಧ್ಯದಲ್ಲೇ ಇಳಿಸಿ ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಇನ್ನೊಬ್ಬರು ತಮ್ಮ ಭದ್ರತಾ ಸಿಬ್ಬಂದಿಗೆ ಹೋಟೆಲ್‌ಗೆ ಹೊರಗೆ ನಿಂತು, ಹೋಟೆಲ್‌ನಲ್ಲಿ ಕೆಲಸ ಇದೆ ಎಂದು ಹೇಳಿ ಹೋಟೆಲ್‌ಗೆ ತೆರಳಿ, ಇನ್ನೊಂದು ಗೇಟ್‌ನಿಂದ ಸೂರತ್‌ನತ್ತ ತೆರಳಿದ್ದಾರೆ.

ಹೀಗೆ ತೆರಳಿದ ಸಚಿವರು, ಶಾಸಕರು ಎಷ್ಟುಹೊತ್ತಾದರೂ ಮರಳಿ ಬರದೇ ಇದ್ದಿದ್ದರಿಂದ ಆತಂಕಗೊಂಡ ಮತ್ತು ಮೊಬೈಲ್‌ ಕರೆ ಕೂಡಾ ಸ್ವೀಕರಿಸದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಹಿತಿ ನೀಡುವಷ್ಟರಲ್ಲಿ ಶಾಸಕರಲ್ಲಿ ಒಂದಾಗಿ ಮಹಾರಾಷ್ಟ್ರ ಗಡಿ ದಾಟಿ ಗುಜರಾತ್‌ ತಲುಪಿದ್ದರು. ಹೀಗಾಗಿ ಸ್ವತಃ ಶಾಸಕರ ಭದ್ರತಾ ಸಿಬ್ಬಂದಿಗೂ ತಮ್ಮ ನಾಯಕರು ರಾಜ್ಯ ಬಿಟ್ಟು ತೆರಳುತ್ತಿರುವ ವಿಷಯ ಅರಿವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.