ಕೊರೋನಾ 2ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಮಾದರಿಯಲ್ಲೇ ಕೊರೋನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಮಹಾರಾಷ್ಟ್ರ ಸರ್ಕಾರ ಪೂರ್ವ ತಯಾರಿ ಆರಂಭಿಸಿದೆ. ಹೇಗಿದೆ ಅಲ್ಲಿನ ತಯಾರಿ..?

ಮುಂಬೈ(ಮೇ.07) : ಅಗತ್ಯ ಪೂರ್ವ ಸಿದ್ಧತೆಯೊಂದಿಗೆ ಮುಂಬೈ ಮಹಾನಗರಿ ಕೊರೋನಾ 2ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಮಾದರಿಯಲ್ಲೇ ಕೊರೋನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಮಹಾರಾಷ್ಟ್ರ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. 

ಈ ನಿಟ್ಟಿನಲ್ಲಿ ಅಗತ್ಯ ವೈದ್ಯಕೀಯ ಆಮ್ಲಜನಕ ಸಂಗ್ರಹ, ಐಸೋಲೇಷನ್‌ ಬೆಡ್‌, ಆಮ್ಲಜನಕ ಇರುವ ಬೆಡ್‌, ಐಸಿಯು, ವೆಂಟಿಲೇಟರ್‌ ಸಾಮರ್ಥ್ಯದ ಬೆಡ್‌ ಸಿದ್ಧಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮುಂಬೈನಲ್ಲಿ ನೀವಿದ್ದಲ್ಲಿಯೇ ಬರುವ ವಿನೂತನ ಲಸಿಕೆ ಅಭಿಯಾನ ಶುರು

ಸಾಮಾಜಿಕ ಜಾಲತಾಣದ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ 3ನೇ ಅಲೆ ಅಪ್ಪಳಿಸುವುದಕ್ಕೂ ಮುನ್ನ ನಾವು ಎಲ್ಲಾ ರೀತಿಯಿಂದ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸದ್ಯ 1200 ಮೆಟ್ರಿಕ್‌ ಟನ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಇತರ ರಾಜ್ಯಗಳಿಂದ 200 ಮೆಟ್ರಿಕ್‌ ಟನ್‌ ಆಮ್ಲಜನಕ ಲಭ್ಯವಾಗಲಿದೆ. ಆದರೆ, ನಾವು 3000 ಮೆಟ್ರಿಕ್‌ ಟನ್‌ ಆಮ್ಲಜನಕ ಲಭ್ಯತೆ ಇರುವಂತೆ ನೋಡಿಕೊಳ್ಳುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ 4.5 ಲಕ್ಷ ಐಸೋಲೇಷನ್‌ ಬೆಡ್‌ಗಳು, ಆಮ್ಲಜನಕ ಪೂರೈಕೆ ಇರುವ 1 ಲಕ್ಷ ಬೆಡ್‌ಗಳು, 30 ಸಾವಿರ ಐಸಿಯು ಬೆಡ್‌ಗಳು ಮತ್ತು 12 ಸಾವಿರ ವೆಂಟಿಲೇಟರ್‌ಗಳನ್ನು ನಾವು ಸಿದ್ಧಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona