Asianet Suvarna News Asianet Suvarna News

ಅಲ್ಲೂ ರೈತ ಸಾಲಮನ್ನಾ : ಮೈತ್ರಿಕೂಟದ ಮಹಾ ಯೋಜನೆ

ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಸಾಲ ಮನ್ನಾವನ್ನೂ ಘೊಷಿಸಿದೆ. 

Maharashtra New Govt Announces Farm Loan Waiving
Author
Bengaluru, First Published Nov 29, 2019, 7:18 AM IST

ಮುಂಬೈ [ನ.29]: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಪ್ರಮಾಣವಚನ ಸ್ವೀಕರಿಸುವ ಕೆಲವೇ ತಾಸುಗಳ ಮುನ್ನ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಪಕ್ಷಗಳನ್ನು ಒಳಗೊಂಡ ‘ಮಹಾ ವಿಕಾಸ ಅಘಾಡಿ’ ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ)ವನ್ನು ಪ್ರಕಟಿಸಿತು. ಮಹಾರಾಷ್ಟ್ರದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.80ರಷ್ಟುಮೀಸಲಾತಿ ನೀಡಲು ಕಾಯ್ದೆ ರೂಪಿಸುವುದಾಗಿ ಘೋಷಿಸಲಾಗಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ರೈತರ ಸಾಲ ಮನ್ನಾ, ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ 1 ರುಪಾಯಿ ಕ್ಲಿನಿಕ್‌, ಅದರಲ್ಲಿ ಕನಿಷ್ಠ ಆರೋಗ್ಯ ತಪಾಸಣೆ ಸೌಲಭ್ಯ, 10 ರು.ಗೆ ಊಟ ನೀಡಲು ಯೋಜನೆ, ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ವಿಮೆ ಕಾರ್ಯಕ್ರಮ, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಧಾನಮಂತ್ರಿ ಗ್ರಾಮಸಡಕ್‌ ರೀತಿ ಮುಖ್ಯಮಂತ್ರಿಗಳ ಗ್ರಾಮಸಡಕ್‌ ಯೋಜನೆ ಜಾರಿಗೆ ತರುವುದಾಗಿ ಪ್ರಕಟಿಸಲಾಗಿದೆ.

ವಿಶೇಷ ಎಂದರೆ, ಶಿವಸೇನೆ ಕಟ್ಟರ್‌ ಹಿಂದುತ್ವವಾದಿ ಪಕ್ಷವಾಗಿ ಗುರುತಿಸಿಕೊಂಡಿದ್ದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪೀಠಿಕೆಯಲ್ಲಿ ಜಾತ್ಯತೀತ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಿಜೆಪಿ- ಶಿವಸೇನೆ ಮಿತ್ರಕೂಟ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಪೂರ್ವದಲ್ಲಿ ವೀರ ಸಾವರ್ಕರ್‌ ಅವರಿಗೆ ಭಾರತರತ್ನ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿತ್ತು. ಆದರೆ ಸಿಎಂಪಿಯಲ್ಲಿ ಅದರ ಬಗ್ಗೆ ಉಲ್ಲೇಖವಿಲ್ಲ.

ಎನ್‌ಸಿಪಿ ನಾಯಕರಾದ ಜಯಂತ್‌ ಪಾಟೀಲ್‌, ನವಾಬ್‌ ಮಲಿಕ್‌, ಶಿವಸೇನೆಯ ಏಕನಾಥ ಶಿಂಧೆ ಅವರು ಸುದ್ದಿಗಾರರೆದುರು ಸಿಎಂಪಿಯನ್ನು ಬಿಡುಗಡೆ ಮಾಡಿದರು.

ಇದೇ ವೇಳೆ ಸರ್ಕಾರದಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಒಂದು ಮತ್ತು ಮೈತ್ರಿಕೂಟದಲ್ಲಿ ಒಂದು ಸಮನ್ವಯ ಸಮಿತಿ ರಚಿಸಲೂ ಮೂರೂ ಪಕ್ಷಗಳು ಸಮ್ಮಿತಿಸಿವೆ.

 ಇತರೆ ಪ್ರಮುಖ ಅಂಶಗಳು

- 2 ಸಮನ್ವಯ ಸಮಿತಿ. ಒಂದು ಸಂಪುಟದೊಳಗೆ. ಮತ್ತೊಂದು ಮಿತ್ರಪಕ್ಷಗಳ ನಡುವೆ.

- ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ, ಬರಪೀಡಿತ ಪ್ರದೇಶಗಳಿಗೆ ನೀರು ಸರಬರಾಜು

- ಆರ್ಥಿಕ ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

- ಕೃಷಿ ಕೂಲಿಕಾರರ ಮಕ್ಕಳು ಹಾಗೂ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಶೂನ್ಯ ಬಡ್ಡಿ ಸಾಲ.

Follow Us:
Download App:
  • android
  • ios