'ಕೇರಳ ಮಿನಿ ಪಾಕಿಸ್ತಾನ, ಅದಕ್ಕೆ ರಾಹುಲ್‌-ಪ್ರಿಯಾಂಕಾ ಗೆಲ್ತಿದ್ದಾರೆ..' ಮಹಾರಾಷ್ಟ್ರ ಮಂತ್ರಿಯ ವಿವಾದಾತ್ಮಕ ಹೇಳಿಕೆ

ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದಾರೆ. ಈ ಹಿಂದೆಯೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕೆ ರಾಣೆ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

Maharashtra minister Nitesh Rane controversial statement Kerala is a mini Pakistan san

ಮುಂಬೈ(ಡಿ.30):ಮಹಾರಾಷ್ಟ್ರದ ನೂತನ ಸಚಿವ ನಿತೇಶ್ ರಾಣೆ ಅವರ ವಿವಾದಾತ್ಮಕ ಹೇಳಿಕೆಯೊಂದು ಬೆಳಕಿಗೆ ಬಂದಿದೆ. ಕೇರಳ ಮಿನಿ ಪಾಕಿಸ್ತಾನ, ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಲ್ಲಿ ಗೆಲ್ಲುತ್ತಿದ್ದಾರೆ. ಅಂತಹ ಜನರು ಸಂಸದರಾಗಲು ಅವರಿಗೆ ಮತ ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ. ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತೇಶ್ ರಾಣೆ ಈ ಹೇಳಿಕೆ ನೀಡಿದ್ದಾರೆ. ಜನರನ್ನು ಉದ್ದೇಶಿಸಿ ಮಾತನಾಡಿದ ನಿತೇಶ್ ರಾಣೆ, ಕೇರಳದ ಉಗ್ರಗಾಮಿಗಳು ಮಾತ್ರ ಪ್ರಿಯಾಂಕಾ ಗಾಂಧಿಗೆ ಮತ ಹಾಕುತ್ತಾರೆ ಎಂದು ಹೇಳಿದರು. ತಮ್ಮ ಭಾಷಣಕ್ಕೂ ಮುನ್ನ ಮಹಾರಾಷ್ಟ್ರ ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ ಸಚಿವ ನಿತೇಶ್ ರಾಣೆ ಪ್ರಚೋದನಕಾರಿ ಭಾಷಣ ಮಾಡದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು.

ಸೂಚನೆ ಇದ್ದರೂ ಸಹ ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ನಿತೇಶ್ ರಾಣೆ ಬಿಜೆಪಿಯ ಹಿರಿಯ ನಾಯಕ ನಾರಾಯಣ ರಾಣೆ ಅವರ ಪುತ್ರ ಮತ್ತು ಈಗ ಮಹಾರಾಷ್ಟ್ರದ ಬಂದರು ಖಾತೆ ಸಚಿವರಾಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರ ವಿರುದ್ಧ 38 ಪ್ರಕರಣಗಳು ದಾಖಲಾಗಿವೆ.

ಈ ಹಿಂದೆಯೂ ಪ್ರಚೋದನಕಾರಿ ಹೇಳಿಕೆ ನೀಡಿದ್ದ ನಿತೇಶ್‌ ರಾಣೆ: ನವೆಂಬರ್ 2ರಂದು, ಮುಸ್ಲಿಮರೊಂದಿಗೆ ನಿಮ್ಮ ಸಮಸ್ಯೆ ಏನು ಎಂದು ಮಾಧ್ಯಮ ಸಿಬ್ಬಂದಿ  ಪ್ರಶ್ನೆ ಮಾಡಿದ್ದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ದೇಶದಲ್ಲಿ ಶೇ.90 ರಷ್ಟು ಜನರು ಹಿಂದೂಗಳು, ಹಿಂದೂಗಳ ಹಿತಾಸಕ್ತಿಗಳ ಬಗ್ಗೆ ಚಿಂತಿಸುವುದು ಅಪರಾಧವಾಗಲಾರದು.ಇದಲ್ಲದೆ, ದೇಶದಲ್ಲಿ ಬಾಂಗ್ಲಾದೇಶಿಯರು ಹಿಂದೂ ಹಬ್ಬಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಪೊಲೀಸ್‌ ಕೇಸ್‌ ದಾಖಲು ಮಾಡಲಾಗಿದೆ. ಹಾಗಾಗಿ ಇವೆಲ್ಲವನ್ನೂ ಎದುರಿಸಲು ನಾನು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

2024ರ ಸೆಪ್ಟೆಂಬರ್‌ನಲ್ಲಿ ಸಂಗೋಳಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ಕೇವಲ 24 ಗಂಟೆ ಸಮಯ ನೀಡಿದರೆ ಸಾಕು, ನನ್ನ ಶಕ್ತಿಯನ್ನು ತೋರಿಸುತ್ತೇನೆ ಎಂದು ಹೇಳಿದ್ದರು. ಅದಕ್ಕೂ ಮುನ್ನ, ಮಸೀದಿಗೆ ನುಗ್ಗಿ ಜನರನ್ನು ಕೊಲ್ಲುವುದಾಗಿ ಹೇಳೀಕೆ ನೀಡಿದ್ದರು. ಅವರ ಈ ಹೇಳಿಕೆಗೆ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಅನ್ಯ ಧರ್ಮದವರ ಜತೆ ವ್ಯವಹಾರ ಬೇಡ: ಹಿಂದುಗಳಿಗೆ ನಿತೇಶ್ ರಾಣೆ ಕರೆ

ಈ ವರ್ಷದ ಏಪ್ರಿಲ್‌ನಲ್ಲಿ, ಮುಂಬೈನ ಉತ್ತರ ಉಪನಗರ ಮೀರಾ ರೋಡ್‌ನಲ್ಲಿ ಜನವರಿಯಲ್ಲಿ ನಡೆದ ಕೋಮು ಹಿಂಸಾಚಾರದ ನಂತರ ಅಲ್ಪಸಂಖ್ಯಾತ ಸಮುದಾಯಕ್ಕೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ರಾಣೆ ವಿರುದ್ಧ ನಾಲ್ಕು ದ್ವೇಷ ಭಾಷಣದ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ನಿತೇಶ್ ರಾಣೆ ವಿರುದ್ಧ ಪ್ರಕರಣ ದಾಖಲಿಸದಿರಲು ಪೊಲೀಸರು ನಂತರ ನಿರ್ಧಾರ ಮಾಡಿದ್ದರು.ಬಿಜೆಪಿ ಶಾಸಕ ತಮ್ಮ ಭಾಷಣಗಳಲ್ಲಿ 'ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ' ಪದಗಳನ್ನು ಬಳಸಿದ್ದಾರೆ, ಅವರು ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ಹೇಳಿಲ್ಲ ಎಂದು ಪೊಲೀಸರು ತಿಳಿಸಿದ್ದರು.

 

Maharashtra Politics: ಆದಿತ್ಯ ಠಾಕ್ರೆ ನೋಡಿ 'ಮಿಯಾಂವ್ ಮಿಯಾಂವ್' ಎಂದ ಬಿಜೆಪಿ ಶಾಸಕ!

ನಿತೇಶ್ ರಾಣೆ ಯಾರು?: ನಿತೇಶ್ ನಾರಾಯಣ ರಾಣೆ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅವರು ಕಂಕಾವಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಸರ್ಕಾರೇತರ ಸಂಸ್ಥೆ ಸ್ವಾಭಿಮಾನ್ ಸಂಘಟನೆಯ ಮುಖ್ಯಸ್ಥರೂ ಆಗಿದ್ದಾರೆ. ದ್ವೇಷದ ಭಾಷಣ ಮಾಡಿದ್ದಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios