ಮಹಾರಾಷ್ಟ್ರದ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಬೋಧಿಸದಿದ್ದರೆ 1 ಲಕ್ಷ ರೂ. ದಂಡ ಹಾಗೂ ಮಾನ್ಯತೆ ರದ್ದುಗೊಳಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ಎಚ್ಚರಿಸಿದೆ. 2020ರ ಕಾಯಿದೆಯ ಅನ್ವಯ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಪಿಟಿಐ ಮುಂಬೈ (ಏ.19): ಮಹಾರಾಷ್ಟ್ರದ ಶಾಲೆಗಳು ಕಡ್ಡಾಯ ಮರಾಠಿ ಬೋಧನೆಯ ನಿಯಮವನ್ನು ಪಾಲಿಸದಿದ್ದರೆ 1 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು ಮತ್ತು ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಸಿದೆ.

Add Asianetnews Kannada as a Preferred SourcegooglePreferred

ರಾಜ್ಯದ ಎಲ್ಲಾ ಆಟೋ ಮತ್ತು ಕ್ಯಾಬ್‌ ಚಾಲಕರು ಕಡ್ಡಾಯವಾಗಿ ಮರಾಠಿ ಕಲಿತಿರಬೇಕು ಎಂದು ಇತ್ತೀಚೆಗೆ ಸರ್ಕಾರ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಶಾಲೆಗಳಿಗೂ ಕಠಿಣ ಸೂಚನೆ ರವಾನಿಸಿದೆ.

2020ರ ಮಹಾರಾಷ್ಟ್ರ ಕಡ್ಡಾಯ ಮರಾಠಿ ಬೋಧನೆ ಕಾಯಿದೆ ಪ್ರಕಾರ, 1ರಿಂದ 10ನೇ ತರಗತಿವರೆಗೆ ಮರಾಠಿಯನ್ನು ಒಂದು ಭಾಷೆಯಾಗಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಶುಕ್ರವಾರ ಠರಾವು ಹೊರಡಿಸಿದ್ದು ಅದರಲ್ಲಿ ‘ಎಲ್ಲಾ ಶಾಲೆಗಳಲ್ಲಿ ಮರಾಠಿ ಕಡ್ಡಾಯವಾಗಿ ಬೋಧಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಘೋಷಿಸಿದೆ. ವಿಶೇಷವಾಗಿ ಕೇಂದ್ರೀಯ ಬೋರ್ಡ್‌ಗಳಿಗೆ (ಸಿಬಿಎಸ್‌ಇ/ಐಸಿಎಸ್‌ಇ) ಸಂಬಂಧಿಸಿದ ಅನೇಕ ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮುಂದಿನ 2 ತಿಂಗಳ ಅವಧಿಯಲ್ಲಿ ಶಾಲೆಗಳಲ್ಲಿ ಮರಾಠಿ ಕಲಿಕೆ ನಿಯಮ ಪಾಲನೆ ಕುರಿತು ತಪಾಸಣೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ಈ ಬಗ್ಗೆ ಉತ್ತರಿಸಲು 15 ದಿನಗಳ ಗಡುವು ನೀಡಲಾಗುವುದು. ಬಳಿಕ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.