ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ, ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರು ಮೊಟ್ಟೆ, ಕಲ್ಲು ಎಸೆದು, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ, ಕಾಲಿನಿಂದ ಒದ್ದಿದ್ದಾರೆ. ಇದೀಗ ಈ ದಾಳಿಗೆ ಮಮತಾ ಬ್ಯಾನರ್ಜಿ ಕೆರಳಿದ್ದಾರೆ.
ಕೋಲ್ಕತಾ (ಮೇ.30) ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡು ಟಿಎಂಸಿ ಹಾಗೂ ಟಿಎಂಸಿ ನಾಯಕರ ವಿರುದ್ಧ ಜನರು ಹಾದಿ ಬೀದಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಚುನಾವಣೆ ಬಳಿಕ ನಡೆದ ಹಿಂಸಾಚಾರ ಪೀಡಿತ ಕುಟುಂಬಗಳ ಭೇಟಿಗೆ 24 ಪರಗಣ ಜಿಲ್ಲೆಗೆ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದ ವೇಳೆ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಟಿಎಂಸಿ ಸಂಸದನ ಮೇಲೆ ಮೊಟ್ಟೆ, ಕಲ್ಲು ಎಸೆತಿದ್ದಾರೆ. ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಕಾಲಿನಿಂದ ಒದ್ದಿದ್ದಾರೆ. ಈ ಘಟನೆಯ ವಿಡಿಯೋಗಳು ಭಾರಿ ಸದ್ದು ಮಾಡುತ್ತಿದೆ. ಈ ಘಟನೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೆರಳಿ ಕೆಂಡವಾಗಿದ್ದಾರೆ. ಇದು ಪಶ್ಚಿಮ ಬಂಗಾಳದ ಬಿಜೆಪಿ ಗೂಂಡಾಗಳು ನಡೆಸಿದ ದಾಳಿ ಎಂದು ಆರೋಪಿಸಿದ್ದಾರೆ.
ನನ್ನ ಹತ್ಯೆಗೆ ಪ್ಲಾನ್ ಮಾಡಿದ್ದರು
ಘಟನೆ ಬಳಿಕ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ಗೂಂಡಾಗಳು ಈ ದಾಳಿ ಮಾಡಿದ್ದಾರೆ. ಅವರು ನನ್ನನ್ನು ಹತ್ಯೆ ಮಾಡಲು ಬಯಸಿದ್ದರು. ಭದ್ರತಾ ಪಡೆಗಳನ್ನು ದಾಟಿ ಬಂದು ಹಲ್ಲೆ ಮಾಡಿದ್ದಾರೆ. ಏಕಾಏಕಿ ಜನ ಸೇರಿದ್ದಾರೆ. ಸ್ಥಳೀಯರ ನಡುವಿನಲ್ಲಿ ನಿಂತು ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ ಎಂದು ಸ್ವತಃ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ಖಂಡಿಸಿರುವ ಟಿಎಂಸಿ ಪಾರ್ಟಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಕಾರ್ಯಕರ್ತರೇ ದಾಳಿ ಮಾಡುತ್ತಿದ್ದಾರೆ. ಪೊಲೀಸ್ ಭದ್ರತೆ ಇಲ್ಲ, ಯಾರ ಭಯವೂ ಇಲ್ಲದಾಗಿದೆ ಎಂದು ಟಿಎಂಸಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಈ ದಾಳಿ ವಿರುದ್ದ ಟಿಎಂಸಿ ಹೋರಾಟ ತೀವ್ರಗೊಳಿಸಲಿದೆ. ಇದು ಬಿಜೆಪಿಗೆ ಎಚ್ಚರಿಕೆ ಎಂದು ಸಂದೇಶ ರವಾನಿಸಿದೆ.
ಅಭಿಷೇಕ್ ಬ್ಯಾನರ್ಜಿ ಹಿಡಿದು ತಳ್ಳಾಡಿದ ಜನ
ಅಭಿಷೇಕ್ ಬ್ಯಾನರ್ಜಿ ದಕ್ಷಿಣ ಸೋನಾಪುರದಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ ಯುವಕನೊಬ್ಬ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದರು. ಈ ಹಿಂಸಾಚಾರ ಪೀಡಿತ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮವನ್ನು ಟಿಎಂಸಿ ಆಯೋಜಿಸಿತ್ತು. ಹೀಗಾಗಿ ಮನೆ ಭೇಟಿಗೆ ತೆರಳಿದಾಗ ಮಹಿಳೆಯರು ಸೇರಿದಂತೆ ಸ್ಥಳೀಯರು ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯರು ಕಳ್ಳ ಕಳ್ಳ ಎಂದು ಕೂಗಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಹಲವರು ಮೊಟ್ಟೆ ಎಸೆದಿದ್ದಾರೆ. ಹಲ್ಲೆ ನಡೆಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.


