* ಕೋವಿಡ್‌ ತಡೆಯುವ ‘ಮಹಾ’ ಗ್ರಾಮಕ್ಕೆ 50 ಲಕ್ಷ ಬಹುಮಾನ* ಮಹಾರಾಷ್ಟ್ರ ಸರ್ಕಾರದಿಂದ ಬಹುಮಾನ ಘೋಷಣೆ* 18 ಗ್ರಾಮಗಳಿಗೆ 50, 25, 15 ಲಕ್ಷ ರು. ಇನಾಮು

ಮುಂಬೈ(ಜೂ.03): ದೇಶದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣ ಹೊಂದಿದ್ದ ಮಹಾರಾಷ್ಟ್ರದಲ್ಲಿ ಗ್ರಾಮಗಳನ್ನು ಕೊರೋನಾ ಮುಕ್ತ ಮಾಡಲು ಉತ್ತೇಜಿಸುವ ಹೊಸ ಸ್ಪರ್ಧಾ ಯೋಜನೆ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತವಾದ ಕೊರೋನಾ ಮುಕ್ತ ಗ್ರಾಮಕ್ಕೆ 50 ಲಕ್ಷ ರು. ಬಹುಮಾನವನ್ನು ನೀಡುವುದಾಗಿ ಸರ್ಕಾರ ಪ್ರಕಟಿಸಿದೆ.

‘ಕೊರೋನಾ ಮುಕ್ತ ಗ್ರಾಮ’ ಎಂಬ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯ ಭಾಗವಾಗಿ ಆಯಾ ಕಂದಾಯ ವಲಯದ ತಲಾ 3 ಗ್ರಾಮಗಳಿಗೆ ಮೊದಲ 3 ಬಹುಮಾನವನ್ನು ನೀಡಲಾಗುತ್ತಿದೆ. ಗ್ರಾಮಗಳನ್ನು ಕೊರೋನಾ ಮುಕ್ತ ಮಾಡಲು ಕೈಗೊಂಡ ಕ್ರಮಗಳನ್ನು ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ಗ್ರಾಮೀಣ ಅಭಿವೃದ್ಧಿ ಸಚಿವ ಹಸನ್‌ ಮುಶ್ರೀಫ್‌ ತಿಳಿಸಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಏನಿದು ಯೋಜನೆ?:

ಈ ಯೋಜನೆಯ ಅನ್ವಯ ಪ್ರತಿ ಕಂದಾಯ ವಿಭಾಗದಲ್ಲಿ ಉತ್ತಮವಾಗಿ ಕೊರೋನಾ ನಿರ್ವಹಣೆ ಮಾಡಿದ ಮೂರು ಗ್ರಾಮ ಪಂಚಾಯತ್‌ಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ಮೊದಲ ಬಹುಮಾನ ಪಡೆದ ಗ್ರಾಮಕ್ಕೆ 50 ಲಕ್ಷ ರು., 2ನೇ ಬಹುಮಾನ ಪಡೆದ ಗ್ರಾಮಕ್ಕೆ 25 ಲಕ್ಷ ರು. ಹಾಗೂ ಮೂರನೇ ಬಹುಮಾನ ಪಡೆದ ರಾಜ್ಯಕ್ಕೆ 15 ಲಕ್ಷ ರು. ಬಹುಮಾನ ಲಭ್ಯವಾಗಲಿದೆ.

ರಾಜ್ಯದಲ್ಲಿ ಒಟ್ಟು 6 ಕಂದಾಯ ವಿಭಾಗಗಳು ಇದ್ದು, ಒಟ್ಟು 18 ಗ್ರಾಮಗಳಿಗೆ ಬಹುಮಾನ ಲಭ್ಯವಾಗಲಿದೆ. ಈ ಯೋಜನೆಗೆ 5.4 ಕೋಟಿ ರು. ನೀಡಲಾಗುವುದು. ಅಲ್ಲದೇ ಮೊದಲ ಬಹುಮಾನ ಗೆದ್ದ ಗ್ರಾಮಕ್ಕೆ ಬಹುಮಾನಕ್ಕೆ ಸಮನಾದ ಹೆಚ್ಚುವರಿ ಹಣವನ್ನು ನೀಡಲಾಗುವುದು. ಈ ಹಣವನ್ನು ಗ್ರಾಮ ಪಂಚಾಯತ್‌ಗಳು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಸ್ಪರ್ಧೆ ಹೇಗೆ?:

ಗ್ರಾಮಗಳನ್ನು ಕೊರೋನಾ ಮುಕ್ತ ಮಾಡುವ ಸ್ಪರ್ಧೆಗೆ 22 ಮಾನದಂಡಗಳನ್ನು ನುಗದಿ ಮಾಡಲಾಗಿದೆ. ಈ 22 ಮಾನದಂಡಗಳನ್ನು ಪೂರೈಸಿದ ಗ್ರಾಮಗಳಿಗೆ ಅವುಗಳ ಸಾಧನೆ ಆಧರಿಸಿ ಪ್ರಶಸ್ತಿ ಪ್ರಕಟಿಸಲಾಗುತ್ತದೆ. ವಿಜೇತ ಗ್ರಾಮಗಳ ಆಯ್ಕೆಗೆ ಸಮಿತಿ ರಚಿಸಲಾಗುತ್ತದೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಹಳ್ಳಿಗಳಲ್ಲಿ ಸೋಂಕು ತಡೆಗೆ ಈ ಉಪಾಯ

2ನೇ ಅಲೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕು ಕಂಡುಬಂದಿತ್ತು. ಹಳ್ಳಿಹಳ್ಳಿಗಳಿಗೂ ಕೊರೋನಾ ವ್ಯಾಪಿಸಿತ್ತು. 3ನೇ ಅಲೆಯಲ್ಲಿ ಮತ್ತೆ ಹೀಗಾಗಬಾರದು ಎಂದು ಗ್ರಾಮೀಣ ಭಾಗದಲ್ಲಿ ಸೋಂಕು ತಡೆಯುವ ವಿನೂತನ ಮಾರ್ಗಗಳನ್ನು ಮಹಾರಾಷ್ಟ್ರ ಸರ್ಕಾರ ಹುಡುಕುತ್ತಿದೆ. ಅದರ ಅಂಗವಾಗಿ ಗ್ರಾ.ಪಂ.ಗಳಿಗೆ ಬಹುಮಾನ ಯೋಜನೆ ಪ್ರಕಟಿಸಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona