ಮುಂಬೈ(ಜೂ.23): ಗಡಿ ವಿಚಾರವಾಗಿ ಭಾರತ​- ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ, 5000 ಕೋಟಿ ರುಪಾಯಿ ಮೊತ್ತದ ಚೀನಾ ಮೂಲದ 3 ಹೂಡಿಕೆ ಪ್ರಸ್ತಾವಗಳಿಗೆ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಬ್ರೇಕ್‌ ಹಾಕಿದೆ.

ಕೇಂದ್ರ ಸರ್ಕಾರದೊಡನೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಕುರಿತು ನಿರ್ದೇಶನ ನೀಡುವವರೆಗೂ ಈ ಒಪ್ಪಂದಗಳಿಗೆ ತಡೆ ಇರುತ್ತದೆ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯ್‌ ತಿಳಿಸಿದ್ದಾರೆ.

ಕೊರೋನಾದಿಂದ ಜರ್ಜರಿತವಾಗಿರುವ ಮಹಾರಾಷ್ಟ್ರ , ಆರ್ಥಿಕ ಪುನಶ್ಚೇತನಕ್ಕಾಗಿ ‘ಮ್ಯಾಗ್ನೆಟಿಕ್‌ ಮಹಾರಾಷ್ಟ್ರ 2.0’ ಎಂಬ ಹೂಡಿಕೆ ಸಮಾವೇಶವನ್ನು ಕಳೆದ ಸೋಮವಾರ (ಜೂ.15) ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಯೋಜನೆ ಮಾಡಿತ್ತು. ಚೀನಾದ ರಾಯಭಾರಿ ಸನ್‌ ವೀಡಾಂಗ್‌ ಕೂಡ ಭಾಗವಹಿಸಿದ್ದರು. ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ ಹಾಗೂ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಕಂಪನಿಗಳ ಜತೆ ಒಂದು ಡಜನ್‌ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಭಾರತ-ಚೀನಾ ಗಡಿ ಬಳಿ ಲಾರಿ ಚಲಿಸುತ್ತಿದ್ದ ವೇಳೆ ಸೇತುವೆ ಕುಸಿತ; ಮೂವರು ಗಂಭೀರ ಗಾಯ!

ಚೀನಾ ಮೂಲದ ಕಾರು ತಯಾರಿಕಾ ಕಂಪನಿಯಾಗಿರುವ ಗ್ರೇಟ್‌ವಾಲ್‌ ಮೋಟ​ರ್ಸ್ 3,770 ಕೋಟಿ ರು, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ 1,000 ಕೋಟಿ ಹಾಗೂ ಹೆಂಗ್ಲಿ ಎಂಜಿನಿಯರಿಂಗ್‌ ಕಂಪನಿ 250 ಕೋಟಿ ರು. ಸೇರಿದಂತೆ ಒಟ್ಟಾರೆ 5020 ಕೋಟಿ ರು. ಅನ್ನು ಮಹಾರಾಷ್ಟ್ರದಲ್ಲಿ ಹೂಡಲು ನಿರ್ಧರಿಸಿದ್ದವು.

ಆದರೆ ಅದೇ ದಿನ ಗಲ್ವಾನ್‌ ಕಣಿವೆಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು 20 ಭಾರತೀಯ ಸೈನಿಕರು ಹತರಾಗಿದ್ದರು. ಚೀನಾ ಕಂಪನಿಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಚೀನಾ ಕಂಪನಿಗಳ ಜತೆಗಿನ 3 ಒಪ್ಪಂದಗಳಿಗೆ ತಡೆ ನೀಡಿದೆ.