ಮುಂಬೈ (ನ. 07):  ಚುನಾವಣೆ ಫಲಿತಾಂಶ ಪ್ರಕಟವಾಗಿ 13 ದಿನವಾದರೂ ಸರ್ಕಾರ ರಚನೆಯಾಗದ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಬುಧವಾರ ತೀವ್ರಗೊಂಡಿವೆ. ಈ ವಿಧಾನಸಭೆ ಅಂತ್ಯದ ಅವಧಿಯಾದ ನವೆಂಬರ್ ೮ರೊಳಗೆ ಸರ್ಕಾರ ರಚಿಸಲೇಬೇಕು ಎಂದು ಬಿಜೆಪಿ ಹಟ ತೊಟ್ಟಿದ್ದು, ಹಿಂಬಾಗಿಲಿನ ಮೂಲಕ ಶಿವಸೇನೆ ಜತೆ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ದೇವೆಂದ್ರ ಫಡ್ನವೀಸ್ ಕರೆದ ಅಭೆಯಲ್ಲಿ ಶಿವಸೇನೆ ನಾಯಕರು ಭಾಗಿ!

ಇದಕ್ಕೆ ಪೂರಕವಾಗಿ, ಗುರುವಾರ ಬಿಜೆಪಿ ನಿಯೋಗವು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗುವ ಕಾರ‌್ಯಕ್ರಮ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಇದೇ ವೇಳೆ, ‘ನಮಗೆ ಜನಾದೇಶವಿಲ್ಲ. ನಮ್ಮ-ಕಾಂಗ್ರೆಸ್ ಬಲ 100 ಕೂಡ ದಾಟಲ್ಲ. ಹೀಗಾಗಿ ನಾವು ಪ್ರತಿಪಕ್ಷದಲ್ಲೇ ಕೂಡಲಿದ್ದೇವೆ. ೨೫ ವರ್ಷದಿಂದ ಮಿತ್ರರಾಗಿರುವ ಶಿವಸೇನೆ-ಬಿಜೆಪಿ ಇಂದಲ್ಲ ನಾಳೆ ಒಂದಾಗಲಿವೆ’ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಈ ಮೂಲಕ ಬಿಜೆಪಿ-ಶಿವಸೇನೆ ಮಧ್ಯೆ ಬಿಕ್ಕಟ್ಟು ಅಂತ್ಯಗೊಳ್ಳುವ ಸುಳಿವು ನೀಡಿದ್ದಾರೆ. ಆದರೆ, ಶಿವಸೇನೆ ಮುಖಂಡ ಸಂಜಯ ರಾವುತ್ ಮಾತ್ರ, ‘ಬಿಜೆಪಿಯಿಂದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ರಚನೆ ಪ್ರಸ್ತಾಪ ಬಂದಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಸ್ಥಾನ ಸೇರಿ ಅಧಿಕಾರದ 50: 50 ಹಂಚಿಕೆಯ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ ಎಂದು ವಿಶ್ಲೇಷಿಸಬಹುದಾಗಿದೆ.

ಆದರೆ ಮೂಲಗಳು ಮಾತ್ರ, ‘ಹಿಂಬಾಗಿಲ ಮೂಲಕ ಮಾತುಕತೆ ನಡೆಯುತ್ತಿದೆ. ಮಹತ್ವದ ತಿರುವು ಪ್ರಾಪ್ತಿಯಾಗುವ ಲಕ್ಷಣವಿದೆ. ಎಲ್ಲ ಸುಗಮವಾಗಿ ನಡೆದರೆ ನವೆಂಬರ್ 9 ರೊಳಗೆ ಸರ್ಕಾರ ರಚನೆಯಾಗಲಿದೆ’ ಎಂದು ಹೇಳಿವೆ.
ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯೆ ನೀಡಿ, ‘ಸಿಎಂ ಹುದ್ದೆ ಹಂಚಿಕೆಗೆ ಬಿಜೆಪಿ ಸಮ್ಮತಿ ಇಲ್ಲ’ ಎಂದಿದ್ದಾರೆ. ಹಾಗಿದ್ದರೆ ಸರ್ಕಾರ ರಚನೆಗೆ ಯಾವ ಸಂಧಾನ ಸೂತ್ರವು ಶಿವಸೇನೆ-ಬಿಜೆಪಿ ನಡುವೆ ಏರ್ಪಡುತ್ತಿದೆ ಎಂಬ ಮಾಹಿತಿ ಲಭಿಸಿಲ್ಲ.