ಮುಂಬೈ ಮಹಾನಗರ ಮಹಾರಾಷ್ಟ್ರಕ್ಕೆ ಸೇರಿದ್ದು, ಕರ್ನಾಟಕದ ವಾಚಾಳಿಗಳಿಗೆ ಛೀಮಾರಿ ಹಾಕಿ ಎಂದು ಶಾಗೆ ಕೋರುತ್ತೇವೆ. ಮಾಧುಸ್ವಾಮಿ, ಲಕ್ಷ್ಮಣ ಸವದಿ, ಡಿಕೆಶಿ ವಿರುದ್ಧ ಮಹಾ ಡಿಸಿಎಂ ದೇವೇಂದ್ರ ಫಡ್ನವೀಸ್ ಸಿಡಿಮಿಡಿ
ನಾಗಪುರ(ಡಿ.29): ‘ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ’ ಎಂಬ ಮಹಾರಾಷ್ಟ್ರದ ಒತ್ತಾಯಕ್ಕೆ ಪ್ರತಿಯಾಗಿ, ‘ಮುಂಬೈ ನಗರವನ್ನು ಕೇಂದ್ರಾಡಳಿತ ಮಾಡಿ’ ಎಂದು ಕೆಲವು ಕನ್ನಡಿಗ ರಾಜಕಾರಣಿಗಳು ಮಾಡಿದ ಆಗ್ರಹಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮುಂಬೈ ಯಾವತ್ತೂ ಮಹಾರಾಷ್ಟ್ರದ ಅವಿಭಾಜ್ಯ ಅಂಗ. ಮುಂಬೈ ಯಾರಪ್ಪನದೂ ಅಲ್ಲ. ಅದರ ಮೇಲೆ ಯಾರೂ ಹಕ್ಕು ಸಾಧಿಸಲು ಆಗದು’ ಎಂದು ಹೇಳಿದ್ದಾರೆ. ವಿಧಾನಪರಿಷತ್ತಿನಲ್ಲಿ ಬುಧವಾರ ಮಾತನಾಡಿದ ಫಡ್ನವೀಸ್, ‘ರಾಜ್ಯದ ಭಾವನೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಲಾಗವುದು’ ಎಂದೂ ತಿಳಿಸಿದ್ದಾರೆ.
ಬೆಳಗ್ಗೆ ಸದನದಲ್ಲಿ ಗಡಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಜಿತ್ ಪವಾರ್, ‘ಕರ್ನಾಟಕದ ಸಿಎಂ ಮತ್ತು ಸಚಿವರು ತಮ್ಮ ಹೇಳಿಕೆಗಳಿಂದ ಮಹಾರಾಷ್ಟ್ರದ ಆತ್ಮಗೌರವವನ್ನು ಘಾಸಿಗೊಳಿಸುತ್ತಿದ್ದಾರೆ. ಕರ್ನಾಟಕದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಅವರು ಮುಂಬೈ ಕರ್ನಾಟಕಕ್ಕೆ ಸೇರಿದ್ದು ಎಂದಿದ್ದು, ಮರಾಠಿ ಜನರ ಗಾಯಗಳಿಗೆ ಉಪ್ಪು ಸವರಿದ್ದಾರೆ. ಆದರೆ, ಮಹಾರಾಷ್ಟ್ರ ಸರ್ಕಾರ ಅದಕ್ಕೆ ತಕ್ಕ ಉತ್ತರ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ಇದನ್ನು ತೀವ್ರವಾಗಿ ಖಂಡಿಸಬೇಕು’ ಎಂದರು.
ನಮ್ಮ ಹಳ್ಳಿ ಕೊಡಲ್ಲ, 1 ಮಹಾ ಹಳ್ಳಿಯೂ ನಮಗೆ ಬೇಡ: DK shivakumar
ಈ ನಡುವೆ, ಶಾಸಕ ಜಯಂತ ಪಾಟೀಲ್ ಮಾತನಾಡಿ, ‘ಬೆಳಗಾವಿ ಹಾಗೂ ಮರಾಠಿ ಭಾಷಿಕ ಪ್ರದೇಶಗಳನ್ನು ಕಾಶ್ಮೀರ ಮಾದರಿಯಲ್ಲಿ ಕೇಂದ್ರಾಡಳಿತ ಮಾಡಬೇಕು. ಲೋಕಸಭೆಗೆ ಈ ಅಧಿಕಾರವಿದ್ದು, ಮೋದಿ ಸರ್ಕಾರದ ಮೇಲೆ ಬಿಜೆಪಿ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.
ಮುಂಬೈ ಯಾರಪ್ಪಂದೂ ಅಲ್ಲ- ಫಡ್ನವೀಸ್:
ಇದಕ್ಕೆ ಉತ್ತರಿಸಿದ ಫಡ್ನವೀಸ್, ‘ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು. ಅದು ಯಾರ ಅಪ್ಪನದೂ ಅಲ್ಲ. ಮುಂಬೈ ಮೇಲೆ ಯಾರಾದರೂ ಹಕ್ಕು ಸಾಧಿಸುವುದನ್ನು ನಾವು ಸಹಿಸುವುದಿಲ್ಲ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವರ ಮುಂದೆ ನಮ್ಮ ಭಾವನೆಗಳನ್ನು ಮಂಡಿಸುತ್ತೇವೆ. ಇಂಥ ವಾಚಾಳಿಗಳಿಗೆ (ಕರ್ನಾಟಕದ ಸಚಿವರಿಗೆ, ಶಾಸಕರಿಗೆ) ಛೀಮಾರಿ ಹಾಕುವಂತೆ ಶಾ ಅವರನ್ನು ಕೋರುತ್ತೇವೆ’ ಎಂದರು.
ಬೆಳಗಾವಿ, ಕಾರವಾರ, ಬೀದರ್ ಸೇರಿ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು: ಮಹಾ ಸದನದಲ್ಲಿ ನಿರ್ಣಯ
‘ಶಾ ಅವರೊಂದಿಗಿನ 2 ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಸಭೆಯಲ್ಲಿ, ಉಭಯ ರಾಜ್ಯಗಳು ಯಾವುದೇ ಹೊಸ ಹಕ್ಕುಗಳನ್ನು ಮಂಡಿಸಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ ಕರ್ನಾಟಕ ಶಾಸಕರು ಅಥವಾ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ಈ ನಿರ್ಣಯಕ್ಕೆ ವಿರುದ್ಧವಾಗಿವೆ. ಮುಂಬೈ ಮೇಲಿನ ಯಾವುದೇ ಹಕ್ಕನ್ನು ಸಹಿಸುವುದಿಲ್ಲ. ಈ ಹೇಳಿಕೆಗಳನ್ನು ಖಂಡಿಸಿ ನಾವು ಕರ್ನಾಟಕ ಸರ್ಕಾರಕ್ಕೆ ಪತ್ರ ಕಳುಹಿಸುತ್ತೇವೆ. ಶಾ ಅವರ ಗಮನಕ್ಕೂ ತರುತ್ತೇವೆ’ ಎಂದು ಡಿಸಿಎಂ ನುಡಿದರು. ‘ಮಹಾರಾಷ್ಟ್ರಕ್ಕೆ ಒಂದೇ ಒಂದು ಗ್ರಾಮವನ್ನು ಬಿಟ್ಟುಕೊಡುವುದಿಲ್ಲ’ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಪ್ರತಿಪಾದಿಸಿ, ಮಹಾರಾಷ್ಟ್ರ ವಿಧಾನಸಭೆ ನಿರ್ಣಯ ಖಂಡಿಸಿದ್ದರು.
ಆದಿತ್ಯ ಠಾಕ್ರೆ ಖಂಡನೆ:
ಮಾಧುಸ್ವಾಮಿ ಹೇಳಿಕೆಯನ್ನು ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಖಂಡಿಸಿದ್ದು, ‘ಮುಂಬೈ ಯಾವತ್ತೂ ಮಹಾರಾಷ್ಟ್ರದ್ದೇ. ಇಂಥ ಸಚಿವರ ಹೇಳಿಕೆಗೆ ಮಹತ್ವ ಬೇಡ’ ಎಂದು ಸುದ್ದಿಗಾರರಿಗೆ ತಿಳಿಸಿದರು.
