ಮುಂಬೈ(ಏ.15): ಕೊರೋನಾ ವೈರಸ್‌ ಹರಡುವಿಕೆ ಮಿತಿ ಮೀರಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಮಹಾರಾಷ್ಟ್ರದಲ್ಲಿ 15 ದಿನಗಳ ‘ಲಾಕ್‌ಡೌನ್‌’ ಮಾದರಿಯ ನಿರ್ಬಂಧಗಳನ್ನು ಹೇರಲಾಗಿದೆ. ಬುಧವಾರ ಸಂಜೆ 7ರಿಂದಲೇ ನಿರ್ಬಂಧಗಳು ಆರಂಭವಾಗಿದ್ದು, ಮೇ 1ರಂದು ಅಂತ್ಯಗೊಳ್ಳಲಿದೆ. ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಬಹುತೇಕ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಮಂಗಳವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಲಾಕ್‌ಡೌನ್‌ ಘೋಷಿಸಿದರು. ‘ಆದರೆ ಇದನ್ನು ಲಾಕ್‌ಡೌನ್‌ ಎನ್ನಲಾಗದು. ಸೋಂಕು ತಡೆಗೆ ವಿಧಿಸಲಾಗಿರುವ ಕಠಿಣ ನಿರ್ಬಂಧಗಳು’ ಎಂದು ಠಾಕ್ರೆ ವ್ಯಾಖ್ಯಾನಿಸಿದರು.

ಅವಧಿಯಲ್ಲಿ ಪರಿಚ್ಛೇದ 144 (ನಿಷೇಧಾಜ್ಞೆ) ಜಾರಿಯಲ್ಲಿರಲಿದೆ. ಒಂದು ಸ್ಥಳದಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕಠಿಣ ನಿರ್ಬಂಧ ಹೇರಿರುವ ಕಾರಣ ಜನರ ಜೀವನಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ 5,476 ಕೋಟಿ ರು. ಮೊತ್ತದ ಪ್ಯಾಕೇಜ್‌ ಘೋಷಿಸಿದರು.

ಯಾವ ನಿರ್ಬಂಧಗಳು?

- ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೇ ಮೇ 1ರವರೆಗೆ ನಿಷೇಧ

- ಚುನಾವಣಾ ಸಭೆಗಳಿದ್ದರೆ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಒಳಾಂಗಣ ಇದ್ದರೆ 50 ಜನರ ಮಿತಿ

- ಮದುವೆಗಳಿದ್ದರೆ 25, ಅತ್ಯಕ್ರಿಯೆಗೆ 20 ಜನರ ಮಿತಿ

- ಶಾಲೆ, ಕಾಲೇಜು, ಕಟಿಂಗ್‌ ಅಂಗಡಿಗಳು, ಟ್ಯೂಶನ್‌ ಕ್ಲಾಸ್‌, ಬೀಚ್‌, ಕ್ಲಬ್‌, ಈಜುಕೊಳ, ಜಿಮ್‌, ನಾಟ್ಯಗೃಹ, ಸಿನಿಮಾ ಮಂದಿರ ಇನ್ನು 15 ದಿನ ಬಂದ್‌

- ರಸ್ತೆ ಬದಿಯ ದರ್ಶಿನಿಗಳಲ್ಲಿ ಪಾರ್ಸಲ್‌ ಸೇವೆ ಮಾತ್ರ, ಅಲ್ಲಿಯೇ ತಿನ್ನುವಂತಿಲ್ಲ

ಯಾವ ಸೇವೆ ಲಭ್ಯ?

- ಲಸಿಕಾ ಕೇಂದ್ರ, ಆಸ್ಪತ್ರೆ, ಔಷಧ ಅಂಗಡಿ ಸೇರಿ ಎಲ್ಲ ಅಗತ್ಯ ಸೇವೆಗಳು ತೆರೆದಿರುತ್ತವೆ

- ತುರ್ತು ಅಗತ್ಯ ಇದ್ದವರಿಗೆ ಸ್ಥಳೀಯ ಸಾರಿಗೆ ಸೇವೆ ಕೂಡ ಲಭ್ಯ.

- ತಿಂಡಿ-ಊಟದ ಹೋಂ ಡೆಲಿವರಿ, ಇ-ಕಾಮರ್ಸ್‌ ಸೇವೆ, ಬ್ಯಾಂಕಿಂಗ್‌ ಸೇವೆ, ಸ್ಥಳದಲ್ಲೇ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಇದ್ದರೆ ಕಟ್ಟಡ ನಿರ್ಮಾಣ ಅಬಾಧಿತ.

ಪರಿಹಾರ ಪ್ಯಾಕೇಜ್‌

- ಸರ್ಕಾರದ ಶಿವಭೋಜನ ಮಂದಿರದಲ್ಲಿನ ಊಟದ 5 ರು. ದರ ರದ್ದು, ಸಂಪೂರ್ಣ ಉಚಿತ ಊಟ

- ರೇಶನ್‌ ಅಂಗಡಿಗಳಲ್ಲಿ ಕಾರ್ಡುದಾರರಿಗೆ ಈ ತಿಂಗಳು 2 ಕೇಜಿ ಅಕ್ಕಿ, 3 ಕೇಜಿ ಗೋಧಿ ಉಚಿತ

- ನಿರ್ಗತಿಕರು, ಅಂಗವಿಕಲರಿಗೆ 2 ತಿಂಗಳ ಮಟ್ಟಿಗೆ ತಲಾ 2000 ರು. ಪರಿಹಾರ

- ಬೀದಿ ವ್ಯಾಪಾರಿಗಳಿಗೆ ತಲಾ 2500 ರು. ಪರಿಹಾರ

- 12 ಲಕ್ಷ ಆದಿವಾಸಿಗಳಿಗೆ 2000 ರು. ಧನಸಹಾಯ