ಪೊಲೀಸ್ ಶ್ವಾನಗಳಿಗೆ ಗುಡ್ ನ್ಯೂಸ್. 10 ವರ್ಷಗಳ ಸೇವೆ ಬಳಿಕ ಪೊಲೀಸ್ ಶ್ವಾನಗಳಿಗೆ ಸರ್ಕಾರವೇ ಆರೈಕೆ ಮಾಡಲಿದೆ. ಈ ಕುರಿತು ಮಹತ್ವದ ಮಾರ್ಗಸೂಚಿ ಹಾಗೂ ಹೊಸ ನೀತಿ ಘೋಷಣೆಯಾಗಿದೆ. ಏನಿದು ಬಿಗ್ ಆಫರ್?

ಮುಂಬೈ (ಆ.22) ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಶ್ವಾನಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹತ್ವದ ಘೋಷಣೆ ಮಾಡಿದ್ದಾರೆ. 10 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶ್ವಾನಗಳ ಆರೈಕೆಯನ್ನು ಇನ್ನು ಮುಂದೆ ಸರ್ಕಾರವೇ ನಿರ್ವಹಿಸಲಿದೆ ಎಂದು ಫಡ್ನವಿಸ್ ಹೇಳಿದ್ದಾರೆ. ಸದ್ಯ 10 ವರ್ಷದ ಬಳಿಕ ನಿವೃತ್ತಿಯಾಗುವ ಶ್ವಾನಗಳನ್ನು ಖಾಸಗಿ ಹಾಗೂ ಹೊರಗಿನ ಕೇಂದ್ರಗಳಿಗೆ ದತ್ತು ನೀಡುವ ನೀತಿ ಇತ್ತು. ಈ ನೀತಿ ಬದಲಾಯಿಸಿ ಶ್ವಾನಗಳ ಆರೈಕೆಯನ್ನು ಸರ್ಕಾರವೇ ಮಾಡಲಿದೆ ಎಂದಿದೆ.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಶ್ವಾನಗಳು ಪೊಲೀಸ್ ಹ್ಯಾಂಡ್ಲರ್ ಜೊತೆ ಇರಲಿದೆ. ಪೊಲೀಸ್ ತನಿಖೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ. ಆದರೆ 10 ವರ್ಷ ಬಳಿಕ ನಿವೃತ್ತಿಯಾದ ಬಳಿಕ ಶ್ವಾನಗಳನ್ನು ಹೊರಗಿನ ಸಂಸ್ಥೆಗಳಿಗೆ ದತ್ತು ನೀಡಲಾಗುತ್ತಿತ್ತು. ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ಇದೀಗ ನಿವೃತ್ತಿ ಬಳಿಕವೂ ಪೊಲೀಸ್ ಹ್ಯಾಂಡ್ಲರ್ ಜೊತೆಗೆ ಶ್ವಾನಗಳು ಇರಲಿದೆ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದಿದೆ.

ಶ್ವಾನಗಳಿಗೆ ಮಾನಸಿಕ ಒತ್ತಡ

10 ವರ್ಷ ಪೊಲೀಸ್ ಹ್ಯಾಂಡ್ಲರ್ ಜೊತೆ ಆಪ್ತವಾಗಿರುವ ಶ್ವಾನಗಳು ಉತ್ತಮ ಬಾಂಧವ್ಯ ಹೊಂದಿರುತ್ತದೆ. 10 ವರ್ಷಗಳ ಬಳಿಕ ನಿವೃತ್ತಿಯಾಗುವ ಶ್ವಾನಗಳನ್ನು ಹ್ಯಾಂಡ್ಲರ್‌ಗಳಿಂದ ಬೇರ್ಪಡಿಸಿ ಹೊರಗಿನವರಿಗೆ ದತ್ತು ನೀಡುವುದರಿಂದ ಶ್ವಾನಗಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತದೆ. ಮರಿಯಿಂದ ಹಿಡಿದು 10 ವರ್ಷಗಳ ಕಾಲ ಹ್ಯಾಂಡ್ಲರ್ ಜೊತೆ ಇರುವಾಗ ಆತ್ಮೀಯ ಸಂಬಂಧವಿರುತ್ತದೆ. ಆದರೆ ಹೊರಗಿನವರಿಗೆ ದತ್ತು ನೀಡಿದಾಗ ಈ ಬಾಂಧವ್ಯ ಕಡಿತಗೊಳ್ಳುತ್ತದೆ. ಹೀಗಾಗಿ 10 ವರ್ಷ ಸಕ್ರಿಯವಾಗಿರುವ ನಾಯಿಗಳು ಬಳಿಕ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ಸಕ್ರಿಯತೆಗಳು ಇರುವುದಿಲ್ಲ. ಹೊಸ ನಿರ್ಧಾರಿಂದ ಈ ಸಮಸ್ಯೆಗಳು ನಿವಾರಣೆಯಾಗಲಿದೆ.

ಪೊಲೀಸ್ ಆರೆಕೆಯಿಂದ ದಿಢೀರ್ ಆಗಿ ದೂರವಾಗುವಾಗ ಎದುರಾಗುವ ಹಲವು ಸಮಸ್ಯೆಗಳು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಹಲವು ದಿನಗಳೇ ತೆಗೆದುಕೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡಲು ದೇವೇಂದ್ರ ಫಡ್ನವಿಸ್ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ದೇವೇಂದ್ರ ಫಡ್ನವಿಸ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಶ್ವಾನ ಪ್ರೀಯರು, ಪ್ರಾಣಿ ಪ್ರಿಯರು ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಹಲವು ಪ್ರಾಣಿ ಪ್ರಿಯರು ಈ ಕುರಿತು ಮನವಿ ಸಲ್ಲಿಸಿದ್ದರು. ಇದೀಗ ದೇವೇಂದ್ರ ಫಡ್ನವಿಸ್ ಈ ಸಮಸ್ಯೆಗೆ ಸ್ಪಂದಿಸಿದ್ದಾರೆ. ನಾಯಿಗಳ ಮಾನಸಿಕ ಒತ್ತಡ, ಮಾನಸಿಕವಾಗಿ ಕುಗ್ಗುವುದು ತಪ್ಪಿಸಲು ಈ ನಿರ್ಧಾರ ಅತ್ಯಂತ ಮುಖ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.