ಮಹಾರಾಷ್ಟ್ರ ಸರ್ಕಾರಕ್ಕೆ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. 15 ಮಂದಿಗೆ ಸಚಿವ ಸ್ಥಾಣ ದೊರಕುವ ಸಾಧ್ಯತೆ ಇದೆ ಎಂದೂ ತಿಳಿದುಬಂದಿದೆ.
ಮಹಾರಾಷ್ಟ್ರ ಸರ್ಕಾರ ಕಳೆದೊಂದು ತಿಂಗಳಿಂದ ‘ಇಡಿ’ ಸರ್ಕಾರವಾಗಿದೆ. ಇದಕ್ಕೆ ಕಾರಣ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಂಡ ನಂತರ ನಾನಾ ಕಾರಣಗಳಿಂದ ಸಚಿವ ಸಂಪುಟ ವಿಸ್ತರನೆಯೇ ಅಗಿಲ್ಲ. ಸಿಎಂ ಹಾಗೂ ಡಿಸಿಎಂ ಮಾತ್ರ ಇಲ್ಲಿ ಸಚಿವರೆನಿಸಿಕೊಂಡಿದ್ದಾರೆ. ಆದರೆ, ಮುಂದಿನ ವಾರ ಮಹಾರಾಷ್ಟ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮುಂದಿನ ವಾರ ತಮ್ಮ ಸಂಪುಟ ವಿಸ್ತರಣೆ ಮಾಡಲಿದ್ದು, ಕನಿಷ್ಠ 15 ಜನ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಅಲ್ಲದೆ, ಡೆಪ್ಯುಟಿ ಸಿಎಂ ದೇವೇಂದ್ರ ಫಡ್ನವೀಸ್ ಮಹತ್ವದ ಗೃಹ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ ಎಂದೂ ಹೇಳಲಾಗಿದೆ. ಇನ್ನೊಂದೆಡೆ, ಒಬಿಸಿ ಮೀಸಲಾತಿ ವಿಚಾರದಿಂದ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬಗೊಂಡಿದ್ದು, ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಈ ಹಿನ್ನೆಲೆ ಸುಪ್ರೀಂ ಈ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ಹೇಳಲಾಗಿದೆ.
ಉದ್ಧವ್ ಠಾಕ್ರೆ ಸರ್ಕಾರ ಕೊನೆಯ ದಿನಗಳಲ್ಲಿ ಕೈಗೊಂಡಿದ್ದ 400 ನಿರ್ಣಯಗಳ ಪರಿಶೀಲನೆ: ಫಡ್ನವೀಸ್
ಶಿವಸೇನೆ ಪಕ್ಷದಲ್ಲಿ ಬಿರುಕುಂಟಾದ ಬಳಿಕ ಉದ್ಧವ್ ಠಾಕ್ರೆ ಜೂನ್ ತಿಂಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ, ಜೂನ್ 30 ರಂದು ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಹಾಗೂ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಇಬ್ಬರೇ ಸರ್ಕಾರ ನಡೆಸುತ್ತಿದ್ದ ಕಾರಣ ಇದನ್ನು ‘ಇಡಿ’ ಸರ್ಕಾರವೆಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದರು.
ಇನ್ನು, ಅಜಿತ್ ಪವಾರ್ ಟೀಕೆಗೆ ಉತ್ತರಿಸಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘’ಅಜಿತ್ ಪವಾರ್ ವಿಪಕ್ಷ ನಾಯಕರಾಗಿದ್ದಾರೆ. ಅವರು ಆ ರೀತಿ ವಿಷಯಗಳನ್ನು ಹೇಳಬೇಕಾಗುತ್ತದೆ. ಅವರು ಸರ್ಕಾರದಲ್ಲಿದ್ದಾಗ ಮೊದಲ 32 ದಿನಗಳ ಕಾಲ ಕೇವಲ ಐವರು ಸಚಿವರಿದ್ದರು ಎಂಬುದನ್ನು ಅಜಿತ್ ದಾದಾ ಮರೆತಿದ್ದಾರೆ’’ ಎಂದು ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ನೀವು ಊಹೆ ಮಾಡುವ ಮುನ್ನವೇ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದೂ ಫಡ್ನವೀಸ್ ಮಾಹಿತಿ ನೀಡಿದ್ದಾರೆ.
ಶಾಸಕರು ಮಲಗಿದ್ದಾಗ ಫಡ್ನವೀಸ್ ರಹಸ್ಯ ಭೇಟಿ: ಸಿಎಂ ಶಿಂಧೆ!
2024 ಲೋಕಸಭೆ ಚುನಾವಣೆಗೆ ಮಿಷನ್..!
2024 ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲು ವಿಪಕ್ಷಗಳು ಹೆಚ್ಚು ಗೆಲ್ಲುತ್ತಿರುವ 16 ಸಂಸದರನ್ನು ಗುರುತಿಸಲಾಗಿದ್ದು, ಈ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತು ಇಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎದು ಫಡ್ನವೀಸ್ ತಿಳಿಸಿದ್ದಾರೆ. ಅಲ್ಲದೆ, ಶಿಂಧೆ ಕ್ಯಾಂಪ್‌ನಲ್ಲಿರುವವರು ಸೇರಿದಂತೆ ಶಿವಸೇನಾ ನಾಯಕರ ಕ್ಷೇತ್ರಗಳು ಸಹ ಈ ಮಿಷನ್‌ನಲ್ಲಿ ಒಳಗೊಂಡಿದೆ ಎಂದೂ ಅವರು ಹೇಳಿದ್ದಾರೆ. ಶಿವಸೇನಾ ಹಾಗೂ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲಿದ್ದು, ಈ ಹಿನ್ನೆಲೆ ಶಿವಸೇನೆ ನಾಯಕರನ್ನು ಸಹ ಗೆಲ್ಲಿಸಲು ಬಿಜೆಪಿ ಯತ್ನಿಸಲಿದೆ’’ ಎಂದೂ ಫಡ್ನವೀಸ್ ಹೇಳಿದ್ದಾರೆ.
ಇನ್ನು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಬಾರಾಮತಿ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದ್ದು, ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ಪಡೆಯಲು ಅವರು ಯತ್ನಿಸಲಿದ್ದಾರೆ ಎಂದೂ ಡಿಸಿಎಂ ಹೇಳಿದ್ದಾರೆ. ಹಾಗೂ, ಅವರು ಸೆಪ್ಟೆಂಬರ್ ತಿಂಗಳಲ್ಲಿ ಬಾರಾಮತಿಗೆ ಪ್ರವಾಸಕ್ಕೆ ಹೋಗಲಿದ್ದಾರೆ. ಆದರೆ, ಇತರೆ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆಯಲು ಯತ್ನಿಸುವ ನಾಯಕರು ಆಯಾ ಕ್ಷೇತ್ರಗಳಿಗೆ ತೆರಳುವ ದಿನಾಂಕಗಳು ಇನ್ನೂ ಅಂತಿಮಗೊಂಡಿಲ್ಲ ಎಂದೂ ಹೇಳಿದರು. ಸದ್ಯ, ಬಾರಾಮತಿ ಪವಾರ್ ಕುಟುಂಬ ಗೆಲ್ಲುವ ಕ್ಷೇತ್ರ ಎನಿಸಿಕೊಂಡಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಈಗಿನ ಸಂಸದೆಯಾಗಿದ್ದಾರೆ.
