* ದೇವೇಂದ್ರ ಫಡ್ನವೀಸ್‌ ನಿಜವಾದ ಕಲಾವಿದ: ಶಿಂಧೆ* ಶಾಸಕರು ಮಲಗಿದ್ದಾಗ ಫಡ್ನವೀಸ್‌ ಭೇಟಿ!* ತಡರಾತ್ರಿ ಭೇಟಿ, ಮುಂಜಾನೆ ಗುವಾಹಟಿಗೆ ವಾಪಸ್‌

ಮುಂಬೈ(ಜು.05): ಮಹಾ ಬಂಡಾಯದ ಸೂತ್ರಧಾರ ದೇವೇಂದ್ರ ಫಡ್ನವೀಸ್‌ ಎಂಬುದು ಎಲ್ಲರಿಗೂ ಗೊತ್ತಿತ್ತಾದರೂ ಅದನ್ನು ಯಾರೂ ಒಪ್ಪಿರಲಿಲ್ಲ. ಆದರೆ ಇದೀಗ ಸ್ವತಃ ಮಹಾ ಸಿಎಂ ಏಕನಾಥ್‌ ಶಿಂಧೆ, ತಮ್ಮ ಬಂಡಾಯ, ರಾತ್ರಿ ಸಂಚಾರ, ಘಟನಾವಳಿಯ ಸೂತ್ರಧಾರನ ಕುರಿತು ಸಂಪೂರ್ಣ ಮಾಹಿತಿಯನ್ನು ವಿಧಾನಸಭೆಯಲ್ಲೇ ಬಿಚ್ಚಿಟ್ಟಿದ್ದಾರೆ.

ರಾಜ್ಯ ವಿಧಾನ ಪರಿಷತ್‌ ಚುನಾವಣೆ ನಡೆದ ದಿನ ನನಗೆ ಆದ ಅವಮಾನ ಅರಿತು, ಅಂದೇ ಉದ್ಧವ್‌ ಬಣ ತೊರೆಯಲು ನಿರ್ಧರಿಸಿದ್ದೆ. ಆದರೆ ಬಿಗಿ ಕಣ್ಗಾವಲಿನ ಮುಂಬೈ ತೊರೆಯುವುದು ಕಷ್ಟವಾಗಿತ್ತು. ಆದರೆ ಮೊಬೈಲ್‌ ಟವರ್‌ ಲೊಕೇಷನ್‌ ಮೂಲಕ ಜನರನ್ನು ಹೇಗೆ ಪತ್ತೆಹಚ್ಚಬಹುದು ಎಂಬುದರ ಜೊತೆಗೆ, ನನಗೆ ಪೊಲಿಸರ ನಾಕಾಬಂಧಿ ತಪ್ಪಿಸಿಕೊಂಡು ಹೋಗುವುದೂ ಗೊತ್ತಿತ್ತು. ಆ ಮಾರ್ಗದಲ್ಲೇ ನಾನು ಸೂರತ್‌ಗೆ ತೆರಳಿದೆ ಎಂದು ಶಿಂಧೆ ಹೇಳಿದ್ದಾರೆ.

ಮುಂದೆ ಗುವಾಹಟಿಯ ಹೋಟೆಲ್‌ನಲ್ಲಿ ಬಂಡಾಯ ಶಾಸಕರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ನಾನು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡುತ್ತಿದ್ದೆ. ಮರಳಿ ಮುಂಜಾವಿನ ವೇಳೆ ಹೋಟೆಲ್‌ ಸೇರಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಎಲ್ಲಾ ಚಟುವಟಿಕೆಗಳಲ್ಲಿ ಉಪಮುಖ್ಯಮಂತ್ರಿ ಫಡ್ನವೀಸ್‌ ಸಕ್ರಿಯವಾಗಿ ಭಾಗಿಯಾಗಿದ್ದರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಸೂತ್ರಧಾರ ಇಲ್ಲೇ ಇದ್ದಾರೆ ಎಂದು ಫಡ್ನವೀಸ್‌ರತ್ತ ಬೊಟ್ಟುಮಾಡಿದ ಶಿಂಧೆ, ಫಡ್ನವೀಸ್‌ ಅವರನ್ನು ನಿಜವಾದ ಕಲಾಕಾರ ಎಂದು ಬಣ್ಣಿಸಿದರು.