ಮಹಾರಾಷ್ಟ್ರ ಫಲಿತಾಂಶ: ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ
ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ | 47 ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಹಾಲಿ ಸರ್ಕಾರ ಪುನರಾಯ್ಕೆ | ಗೆದ್ದರೂ ಬಿಜೆಪಿ- ಶಿವಸೇನೆ ಮಿತ್ರಕೂಟಕ್ಕೆ ಅಚ್ಚರಿಯ ಹಿನ್ನಡೆ | 19 ಪಕ್ಷಾಂತರಿಗಳಿಗೆ ಸೋಲು | ಮುಂಡೆ ಪುತ್ರಿಗೂ ಗೆಲುವಿಲ್ಲ
ಮುಂಬೈ (ಅ.25): ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮಿತ್ರಕೂಟ ನಿರೀಕ್ಷೆಯಂತೆಯೇ ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಸಫಲವಾಗಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆಯಾದ 145 ಅನ್ನು ನಿರಾಯಾಸವಾಗಿ ಈ ಮಿತ್ರಕೂಟ ದಾಟಿದ್ದು, ಕಾಂಗ್ರೆಸ್- ಎನ್‌ಸಿಪಿ ಕೂಟಕ್ಕೆ ಭಾರಿ ಹಿನ್ನಡೆಯಾಗಿದೆ.
ಮರಾಠ ಸಮುದಾಯದ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವೀಸ್ ಅವರು ಇನ್ನೊಮ್ಮೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಪುತ್ರ, ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಠಾಕ್ರೆ ಕುಟುಂಬದ ಮೊದಲ ಕುಡಿ, 29 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಲಭಿಸುತ್ತದೆಯೇ ಎಂಬ ಕುತೂಹಲಕ್ಕೆ ಉತ್ತರ ಸಿಗಬೇಕಿದೆ.
ಮೋದಿ ರಾಷ್ಟ್ರಪಿತ ಎಂದ ಫಡ್ನವೀಸ್ ಪತ್ನಿ: ಟ್ವಿಟರ್ ರಿಯಾಕ್ಷನ್ ಗೆ ಚಟ್ನಿ!
5 ವರ್ಷ ಅಧಿಕಾರಾವಧಿ ಪೂರೈಸಿದ ಮುಖ್ಯಮಂತ್ರಿಯೊಬ್ಬರು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರುವುದು ಮಹಾರಾಷ್ಟ್ರದ ಇತಿಹಾಸದಲ್ಲಿ 47 ವರ್ಷಗಳಲ್ಲಿ ಇದೇ ಮೊದಲು. 1972ರಲ್ಲಿ ವಸಂತರಾವ್ ನಾಯಕ್ ಅವರು ಈ ಸಾಧನೆ ಮಾಡಿದ್ದ ಕೊನೆಯವರಾಗಿದ್ದರು.
ಅನಿರೀಕ್ಷಿತ ಹಿನ್ನಡೆ:
ಬಿಜೆಪಿ- ಶಿವಸೇನೆ ಮಿತ್ರಕೂಟ ಮತ್ತೆ ಅಧಿಕಾರಕ್ಕೇರುವಲ್ಲಿ ಸಫಲತೆ ಕಂಡಿದ್ದರೂ, ನಿರೀಕ್ಷಿತ ಸ್ಥಾನಗಳು ಬಂದಿಲ್ಲ. ಹಾಗೆ ನೋಡಿದರೆ, ಎರಡೂ ಪಕ್ಷಗಳು 2014ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಸ್ಥಾನಗಳನ್ನೂ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. 5 ವರ್ಷಗಳ ಹಿಂದೆ ಪ್ರತ್ಯೇಕವಾಗಿ ಅಖಾಡಕ್ಕೆ ಇಳಿದಿದ್ದ ಈ ಪಕ್ಷಗಳು ಈ ಬಾರಿ ಮೈತ್ರಿ ಮಾಡಿಕೊಂಡಿದ್ದರಿಂದ ಕಳೆದ ಸಲಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ವಿಶ್ಲೇಷಣೆಗಳು ಬಂದಿದ್ದವು. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಈ ದೋಸ್ತಿ ಪಕ್ಷಗಳು 200ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದವು. ಈಗ ಅದೆಲ್ಲವೂ ಸುಳ್ಳಾಗಿದೆ.
ಪಕ್ಷಾಂತರಿಗಳಿಗೆ ಸೋಲು:
5 ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮಿತ್ರಕೂಟ ಶೇ.52ರಷ್ಟುಮತಗಳನ್ನು ಗಳಿಸಿತ್ತು. 48 ಲೋಕಸಭಾ ಕ್ಷೇತ್ರಗಳ ಪೈಕಿ 42ರಲ್ಲಿ ಜಯಭೇರಿ ಬಾರಿಸಿತ್ತು. ಹೀಗಾಗಿ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ಅದಮ್ಯ ವಿಶ್ವಾಸದಲ್ಲಿದ್ದವು. ಈ ಗುರಿ ಸಾಧನೆಗಾಗಿ ಕಾಂಗ್ರೆಸ್ ಹಾಗೂ ಶಿವಸೇನೆಯಿಂದ ಸಾಕಷ್ಟುಸಂಖ್ಯೆಯ ನಾಯಕರನ್ನು ಸೆಳೆದುಕೊಂಡಿದ್ದವು. ಆದರೆ ಪಕ್ಷಾಂತರಿಗಳಲ್ಲಿ ಬಹುತೇಕ ಮಂದಿಗೆ ಸೋಲಾಗಿದೆ. ಕಾಂಗ್ರೆಸ್- ಎನ್‌ಸಿಪಿ ತೊರೆದು ಶಿವಸೇನೆ ಸೇರಿದ್ದವರ ಪೈಕಿ 11 ಮಂದಿ, ಬಿಜೆಪಿಗೆ ಸೇರ್ಪಡೆಯಾಗಿದ್ದವರ ಪೈಕಿ 8 ಮಂದಿ ಮಣ್ಣು ಮುಕ್ಕಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಗೋಪಿನಾಥ ಮುಂಡೆ ಅವರ ಪುತ್ರಿ, ಸಚಿವೆಯಾಗಿರುವ ಪಂಕಜಾ ಮುಂಡೆ ಅವರು ಸೋಲೊಪ್ಪಿಕೊಂಡಿದ್ದಾರೆ.
ದೇವೇಂದ್ರ ಫಡ್ನವೀಸ್ ಅವರು ಗೆದ್ದಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಾದ ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್ ಮರು ಆಯ್ಕೆಯಾಗಿದ್ದಾರೆ. ಎನ್‌ಸಿಪಿಯ ಮಾಜಿ ಡಿಸಿಎಂ ಅಜಿತ್ ಪವಾರ್ ಜಯಭೇರಿ ಬಾರಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್- ಎನ್‌ಸಿಪಿ ಎರಡೂ ಶಿವಸೇನೆಯನ್ನು ಸೆಳೆದು ಸರ್ಕಾರ ರಚಿಸುವ ಪ್ರಯತ್ನ ನಡೆಸಲಿವೆ ಎಂಬ ವದಂತಿ ಹಬ್ಬಿತ್ತು. ಆದರೆ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸುವುದರೊಂದಿಗೆ ಆ ವದಂತಿಗೆ ತೆರೆಬಿದ್ದಿದೆ.