ಛತ್ತೀಸ್‌ಗಢ ಸಿಎಂಗೆ ₹508 ಕೋಟಿ ಕೊಟ್ಟಿಲ್ಲ: ಆರೋಪಿ ಅಸೀಂ ದಾಸ್‌ ಉಲ್ಟಾ- ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಹಗರಣದ ತನಿಖೆಗೆ ಮಹತ್ವದ ತಿರುವು

ನವದೆಹಲಿ (ನ.26): ನೂರಾರು ಕೋಟಿ ರು. ಹವಾಲಾ ಅವ್ಯವಹಾರ ನಡೆದಿದೆ ಎನ್ನಲಾದ ಮಹಾದೇವ್ ಬೆಟ್ಟಿಂಗ್‌ ಆ್ಯಪ್‌ ಹಗರಣಕ್ಕೆ ಮಹತ್ವದ ತಿರುವು ಲಭಿಸಿದ್ದು, ಈ ಹಿಂದೆ ತಾನು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರಿಗೆ 508 ಕೋಟಿ ರು. ಹಣ ನೀಡಿದ್ದಾಗಿ ಹೇಳಿದ್ದ ಹಗರಣದ ಆರೋಪಿ ಅಸೀಂ ದಾಸ್‌ ಉಲ್ಟಾ ಹೊಡೆದಿದ್ದಾನೆ.

ಮಹಾದೇವ್‌ ಆ್ಯಪ್‌ನ ‘ಕೊರಿಯರ್‌’ ಎಂದೇ ಕುಖ್ಯಾತನಾದ ಅಸೀಂ ದಾಸ್‌ ಸದ್ಯ ಜೈಲಿನಲ್ಲಿದ್ದು, ಅಲ್ಲಿಂದ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಿಗೆ ಪತ್ರ ಬರೆದು, ‘ನಾನು ಯಾರಿಗೂ ಹಣ ಕೊಟ್ಟಿಲ್ಲ. ನನ್ನನ್ನು ಈ ಅಕ್ರಮದಲ್ಲಿ ಸಿಲುಕಿಸಲಾಗಿದೆ’ ಎಂದು ಹೇಳಿದ್ದಾನೆ.

ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ ಹಗರಣ: ದುಬೈಗೆ ಪರಾರಿಯಾಗಲು ಹೇಳಿದ್ದೇ ಸಿಎಂ ಬಘೇಲ್‌: ಶುಭಂ ಸೋನಿ

ನ.3ರಂದು 5 ಕೋಟಿ ರು. ನಗದಿನೊಂದಿಗೆ ಅಸೀಂ ದಾಸ್‌ನನ್ನು ಇ.ಡಿ. ಬಂಧಿಸಿತ್ತು. ನಂತರ ಆತ ತಾನು ಮಹಾದೇವ್‌ ಆ್ಯಪ್‌ನ ಮಾಲಿಕರು ನೀಡುವ ಹಣವನ್ನು ರಾಜಕಾರಣಿಗಳು ಹಾಗೂ ಪ್ರಭಾವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಛತ್ತೀಸ್‌ಗಢದ ಕಾಂಗ್ರೆಸ್‌ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರಿಗೆ 508 ಕೋಟಿ ರು. ನೀಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿಸಿತ್ತು.

ಈಗ ಇ.ಡಿ. ಮುಖ್ಯಸ್ಥರಿಗೆ ಪತ್ರ ಬರೆದು ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿರುವ ದಾಸ್‌, ‘ಇಂಗ್ಲಿಷ್‌ನಲ್ಲಿರುವ ಪತ್ರಕ್ಕೆ ನನ್ನಿಂದ ಅಧಿಕಾರಿಗಳು ಸಹಿ ಹಾಕಿಸಿಕೊಂಡಿದ್ದರು. ನನಗೆ ಇಂಗ್ಲಿಷ್‌ ಬರುವುದಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ’ ಎಂದು ಅಲವತ್ತುಕೊಂಡಿದ್ದಾನೆ.

ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಘೇಲ್‌ಗೂ ಮಹದೇವ ‘ಪ್ರಸಾದ’ ವಿತರಣೆ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಲಂಚ!

‘ಆ್ಯಪ್‌ನ ಪ್ರವರ್ತಕ ಶುಭಂ ಸೋನಿ ಹಾಗೂ ನಾನು ಬಾಲ್ಯ ಸ್ನೇಹಿತರು. ಅವನ ಸೂಚನೆಯ ಮೇಲೆ ಅಕ್ಟೋಬರ್‌ನಲ್ಲಿ ಎರಡು ಸಲ ದುಬೈಗೆ ಹೋಗಿದ್ದೆ. ಅವನು ಛತ್ತೀಸ್‌ಗಢದಲ್ಲಿ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡುವುದಾಗಿ ಹೇಳಿ ನನ್ನ ಸಹಾಯ ಕೇಳಿದ್ದ. ನಾನು ಬಿಸಿನೆಸ್‌ ನೋಡಿಕೊಳ್ಳಬೇಕೆಂದೂ, ಅವನು ಅದಕ್ಕೆ ಹಣ ಕೊಡುವುದಾಗಿಯೂ ಮಾತುಕತೆ ಆಗಿತ್ತು. ಅದರಂತೆ ಒಂದು ದಿನ ನಾನು ರಾಯ್ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನನ್ನನ್ನು ಕಾರಿನಲ್ಲಿ ಕರೆದೊಯ್ದು ಹೋಟೆಲ್‌ಗೆ ಬಿಡಲಾಯಿತು. ಆ ಕಾರಿನಲ್ಲಿ ಯಾರೋ ಹಣ ತಂದಿಟ್ಟರು. ಬಳಿಕ ನನ್ನನ್ನು ಇ.ಡಿ. ಬಂಧಿಸಿತು. ಆಗ ನನ್ನನ್ನು ಈ ಜಾಲದಲ್ಲಿ ಸಿಲುಕಿಸಲಾಗುತ್ತಿದೆ ಎಂಬುದು ನನಗೆ ತಿಳಿಯಿತು’ ಎಂದು ಪತ್ರದಲ್ಲಿ ಹೇಳಿದ್ದಾನೆ.