ಚೆನ್ನೈ, (ಮೇ.08): ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲ TASMAC ಮದ್ಯದಂಗಡಿಗಳನ್ನು ಮುಚ್ಚುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ಹೊರಡಿಸಿದೆ.

ಮದ್ಯದಂಗಡಿ ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಮಾತ್ರಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. 

ಈ ಅರ್ಜಿ ವಿಚಾರಣೆ ಮಾಡಿದ ಮದ್ರಾಸ್ ಹೈ ಕೋರ್ಟ್ TASMAC ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ತಮಿಳುನಾಡಿನಲ್ಲಿ ಶುಕ್ರವಾರ ಒಂದೇ ದಿನ 600 ಕೊರೋನಾ ಕೇಸ್ ಪತ್ತೆಯಾಗಿರುವುದರಿಂದ ಎಚ್ಚೆತ್ತ ಕೋರ್ಟ್, ಜನಸಂದಣಿ ಸೇರಬಾರದೆಂದು ಈ ಕ್ರಮಕೈಗೊಂಡಿದೆ. ಇದರ ಬದಲಾಗಿ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಶೇ. 40ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಮದ್ಯ 'ಹಲಾಲ್'!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಂಗಡಿಗಳು ಓಪನ್ ಆಗಿದ್ದೆ ತಡ ಎಣ್ಣೆ ಪ್ರಿಯರು ವೈನ್ ಶಾಪ್‌ಗಳ ಮುಂದೆ ಗುಂಪು-ಗುಂಪಾಗಿ ಪ್ರತ್ಯಕ್ಷರಾಗುತ್ತಿದ್ದಾರೆ. 

ಇಷ್ಟು ದಿನ ಬಂದ್ ಆಗಿದ್ದ ಮದ್ಯದಂಗಡಿ ಮುಂದೆ ಪಾನಪ್ರಿಯರು ಯಾವುದೇ ಸಮಾಜಿಕ ಅಂತರ ಕಾಪಾಡದೇ ನಿಯಮವನ್ನು ಗಾಳಿ ತೂರುತ್ತಿದ್ದಾರೆ. ಇದರಿಂದ ಸುಪ್ರೀಂಕೋರ್ಟ್‌ ಸಹ ರಾಜ್ಯ ಸರ್ಕಾರಗಳಿಗೆ ಆನ್‌ಲೈನ್ ಮದ್ಯ ಮಾರಾಟದ ಬಗ್ಗೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.