* ಸುಳ್ಳು ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಸಂವೇದನಶೀಲ ವಿಷಯಗಳ ಕುರಿತು ಟ್ವೀಟ್ * ಮಧ್ಯ ಪ್ರದೇಶ ಹಿಂದಸಾಚಾರ, ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್ ಬಂಧನ ಸಾಧ್ಯತೆ* ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿಕೆ
ಭೋಪಾಲ್(ಏ.14): ಸುಳ್ಳು ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಸಂವೇದನಶೀಲ ವಿಷಯಗಳ ಕುರಿತು ಟ್ವೀಟ್ ಮಾಡಿದ ಆರೋಪದಡಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ.
ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ರಾಮನವಮಿ ಶೋಭಾಯಾತ್ರೆಯಂದು ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ಅವರು ಮಂಗಳವಾರ, ಕೆಲವರು ಯುವಕರು ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ‘ಖರ್ಗೋನ್ ಆಡಳಿತವು ಶಸ್ತ್ರಾಸ್ತ್ರಗಳೊಂದಿಗೆ ಶೋಭಾಯಾತ್ರೆ ನಡೆಸಲು ಅನುಮತಿ ನೀಡಿತ್ತೇ?’ ಎಂದು ಪ್ರಶ್ನಿಸಿದ್ದರು. ಈ ಚಿತ್ರವು ಸುಳ್ಳು ಎಂದು ತಿಳಿದದ್ದೇ ದಿಗ್ವಿಜಯ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಆದರೆ ಅದು ಟ್ವೀಟರಿನಲ್ಲಿ ವೈರಲ್ ಆಗಿತ್ತು.
ಹೀಗಾಗಿ ಸುಳ್ಳು ಮಾಹಿತಿ ಮೂಲಕ ಕೋಮು ಗಲಭೆ ಪ್ರಚೋದಿಸಿದ್ದಕ್ಕಾಗಿ ಭೋಪಾಲ್ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಿಶ್ರಾ ಹೇಳಿದ್ದಾರೆ.
ತೇಜಸ್ವಿ ಸೂರ‍್ಯ ‘ನ್ಯಾಯಯಾತ್ರೆ’ಗೆ ರಾಜಸ್ಥಾನ ತಡೆ
ರಾಜಸ್ಥಾನದ ಕೋಮುಗಲಭೆ ಪೀಡಿತ ಕರೌಲಿಗೆ ಭೇಟಿ ನೀಡುಲು ‘ನ್ಯಾಯ ಯಾತ್ರೆ’ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕರನ್ನು ಪೊಲೀಸರು ಬುಧವಾರ ತಡೆದಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಅವರೊಂದಿಗೆ ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಕರೌಲಿಗೆ ಸಂತ್ರಸ್ತರ ಭೇಟಿಗೆಂದು ಹೊರಟಿದ್ದರು. ಆಗ ರಾಜ್ಯದ ಪೊಲೀಸರು ಅವರನ್ನು ಮಾರ್ಗ ಮಧ್ಯದಲ್ಲಿ ದೌಸಾ ಗಡಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
‘ಆದರೆ ಇದಕ್ಕೆಲ್ಲ ನಾವು ಹೆದರುವುದಿಲ್ಲ. ಇದು ರಾಜಸ್ಥಾನವೋ, ಅಷ್ಘಾನಿಸ್ತಾನವೋ.. ಕಾಂಗ್ರೆಸ್ ‘ಆಧುನಿಕ ಯುಗದ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ’ ಎಂದು ಸೂರ್ಯ ಕಿಡಿಕಾರಿದ್ದಾರೆ.
ಯಾತ್ರೆ ಏಕೆ?:
ಕರೌಲಿಯಲ್ಲಿ ಏ. 2ರಂದು ಹಿಂದೂಗಳ ನವ ವರ್ಷ ನಿಮಿತ್ತ ವಿಎಚ್‌ಪಿ, ಬಜರಂಗ ದಳ ಹಾಗೂ ಆರೆಸ್ಸೆಸ್ ಬೈಕ್ ರಾರಯಲಿ ಆಯೋಜಿಸಿದ್ದವು. ಬಹುಸಂಖ್ಯಾತ ಮುಸ್ಲಿಮರು ಇರುವ ಇಲ್ಲಿ ಬೈಕ್ ರಾರಯಲಿ ಮೇಲೆ ಜನರು ಕಲ್ಲು ತೂರಾಟ ನಡೆಸಿದ್ದರು. ಆಗ 11 ಮಂದಿಗೆ ಗಾಯವಾಗಿತ್ತು. ಇದಾದ ನಂತರವೂ ಹಲವಾರು ಮನೆ ಹಾಗೂ ಅಂಗಡಿಗಳಿಗೆ ಬೆಂಕಿಯಿಡಲಾಗಿತ್ತು. ಗಲಭೆಯ ಸಂತ್ರಸ್ತರನ್ನು ಭೇಟಿ ಮಾಡಲು ಸೂರ್ಯ ಕರೌಲಿಗೆ ಹೊರಟಿದ್ದರು.
ಸದ್ಯ ಕರೌಲಿಯಲ್ಲಿ ಸ್ಥಿತಿ ಇದೆ. ಈಗ ಬಿಜೆಪಿ ನಾಯಕರ ಭೇಟಿಯಿಂದ ಮತ್ತೆ ಸಮಸ್ಯೆ ಉಲ್ಬಣವಾಗಬಹುದು ಎಂದು ಪೊಲೀಸರು ಯಾತ್ರೆ ತಡೆದಿದ್ದಾರೆ ಎನ್ನಲಾಗಿದೆ.
