ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಗರ್ಭದಲ್ಲೇ ಮೃತಪಟ್ಟಿದೆ ಗರ್ಭಪಾತ ಮಾಡಿ ಎಂದು ಘೋಷಿಸಿದ ಬಳಿಕ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಗರ್ಭದಲ್ಲೇ ಸಾವನ್ನಪ್ಪಿದೆ ಎಂದು ಹೇಳಿದ್ದ ಗಂಟೆಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದಂತಹ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಾತ್ನಾ ಜಿಲ್ಲಾಸ್ಪತ್ರೆಯ ವೈದ್ಯರು ಡಾಪ್ಲರ್ ಮತ್ತು ಸೋನೋಗ್ರಫಿ ನಡೆಸಿ ಮಗುವಿನ ಹೃದಯ ಬಡಿತವನ್ನು ಪತ್ತೆ ಮಾಡಲು ವಿಫಲವಾದ ನಂತರ ಮಗು ಗರ್ಭದಲ್ಲಿಯೇ ಸಾವನ್ನಪ್ಪಿದ ಎಂದು ಘೋಷಣೆ ಮಾಡಿ ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಆದರೆ ಗರ್ಭಿಣಿ ಮಹಿಳೆಯ ಕುಟುಂಬದವರು ಬೇರೆ ವೈದ್ಯರಿಂದ ಎರಡನೇ ಅಭಿಪ್ರಾಯವನ್ನು ಪಡೆಯಲು ಮುಂದಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ತಪಾಸಣೆ ನಡೆಸಿದೆ. ಆದರೆ ಅಲ್ಲಿ ಭ್ರೂಣವು ಆರೋಗ್ಯಕರವಾಗಿದೆ ಎಂಬುದು ತಪಾಸಣೆ ವೇಳೆ ಕಂಡು ಬಂದಿದೆ. ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು ಅಲ್ಲಿ ಅವರು ಸಿಸೇರಿಯನ್ ಮೂಲಕ ಮೂರುವರೆ ಕೆಜಿ ತೂಕದ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಸಾತ್ನಾದ ರಾಂಪುರ್ ಬಾಗೇಲನ್‌ನ ಚಕೇರಾ ಗ್ರಾಮದ ದುರ್ಗಾ ದ್ವಿವೇದಿ ಎಂಬ 24 ವರ್ಷದ ಮಹಿಳೆಗೆ ಜುಲೈ15-16ರ ನಸುಕಿನ ಜಾವ 2 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಮೊದಲಿಗೆ ಕುಟುಂಬದವರು ಅಮರ್‌ಪಟನ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಗರ್ಭಾಧಾರಣೆಯ ಸ್ಥಿತಿ ಅಪಾಯಕಾರಿಯಾಗಿ ಕಂಡು ಬಂದ ಹಿನ್ನೆಲೆ ಅವರನ್ನು ಅಲ್ಲಿಂದ ಬೆಳಗ್ಗೆ 4 ಗಂಟೆಗೆ ಸಾತ್ನಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸೋನೋಗ್ರಫಿ ವೇಳೆ ಪತ್ತೆಯಾಗದ ಎದೆಬಡಿತ
ನಂತರ ಬೆಳಗ್ಗೆ 7.30ರ ಸುಮಾರಿಗೆ ಆಸ್ಪತ್ರೆಗೆ ಧಾವಿಸಿದ ಅಲ್ಲಿನ ವೈದ್ಯರು ಅವರಿಗೆ ರಕ್ತಪರೀಕ್ಷೆ ಮಾಡಿದರು. ಆದರೆ 9 ಗಂಟೆಯ ಹೊತ್ತಿಗೆ ಮತ್ತೊಬ್ಬ ವೈದ್ಯರು ಡಾಪ್ಲರ್ ಹಾಗೂ ಸೋನೋಗ್ರಫಿ ನಡೆಸಿದಾಗ ವೈದ್ಯರಿಗೆ, ಮಗುವಿನ ಹೃದಯ ಬಡಿತ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ, ಭ್ರೂಣದ ಚಲನೆಯೂ ಕಂಡುಬಂದಿಲ್ಲ, ಇದರಿಂದ ಮಗು ಗರ್ಭದಲ್ಲೇ ಸಾವನ್ನಪ್ಪಿದೆ ಎಂದು ವೈದ್ಯರು ತೀರ್ಮಾನಿಸಿದರು. ಹೀಗಾಗಿ ಔಷಧಿ ನೀಡಿ ಗರ್ಭಪಾತ ನಡೆಸಲು ಸಲಹೆ ನೀಡಿದರು.
ಆದರೆ ದುರ್ಗಾ ಅವರ ಪತಿ ರಾಹುಲ್ ದ್ವಿವೇದಿ ಮತ್ತೊಮ್ಮೆ ಖಾಸಗಿಯಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದರು. ಹೃದಯ ಬಡಿತ ಇಲ್ಲವೆಂದು ಹೇಳಿದರು ದೊಡ್ಡ ಹೆಜ್ಜೆ ಇಡುವ ಮುನ್ನ ಖಚಿತತೆ ಇರಬೇಕು ಎಂಬ ಕಾರಣಕ್ಕೆ ನಾವು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮತ್ತೊಮ್ಮೆ ಸ್ಕ್ಯಾನ್ ಮಾಡಲು ನಿರ್ಧರಿಸಿದೆವು ಎಂದು ಹೇಳಿದರು. ಈಗ ಮಗು ಅವರಿಗೆ ಜೀವಂತವಾಗಿ ಸಿಕ್ಕಿದ್ದು, ರಾಹುಲ್ ಅವರ ಚಿಂತನೆಯಿಂದ ಮುದ್ದಾದ ಮಗು ಬದುಕುಳಿದಿದೆ.
ಸಿಸೇರಿಯನ್ ಮೂಲಕ ಆರೋಗ್ಯವಂತ ಮಗುವಿಗೆ ಜನನ
ನಂತರ ಅವರು ಪತ್ನಿಯನ್ನು ಕರೆದುಕೊಂಡು ಭರ್ಹುತ್‌ನಗರದಲ್ಲಿ ತಪಾಸಣೆ ಮಾಡಿಸಿದಾಗ ಮಗು ಜೀವಂತವಾಗಿದ್ದು, ಆರೋಗ್ಯವಾಗಿರುವುದು ತಿಳಿದು ಬಂತು. ತಕ್ಷಣ ದುರ್ಗಾ ಅವರನ್ನು ಖಾಸಗಿ ನರ್ಸಿಂಗ್ ಹೋಮ್‌ಗೆ ಸ್ಥಳಾಂತರಿಸಿ ಅಲ್ಲಿ ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಯ್ತು.
ಈ ಪ್ರಕರಣ ಈಗ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಲಾಗುವುದು ಹಾಗೂ ಯಾವುದೇ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಸಿಎಂಹೆಚ್‌ಒ ಡಾ. ಎಲ್.ಕೆ ತಿವಾರಿ ಹೇಳಿದ್ದಾರೆ.
ಒಟ್ಟಿನಲ್ಲಿ ಮಗುವಿನ ತಂದೆ ಹಾಗೂ ಕುಟುಂಬದವರ ಸಮಯಪ್ರಜ್ಞೆಯಿಂದ ಆರೋಗ್ಯವಂತ ಮಗುವೊಂದು ಬದುಕುಳಿದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ಮಾತು ನಂಬಿ ಪೋಷಕರೇನಾದರು ಗರ್ಭಪಾತಕ್ಕೆ ಮುಂದಾಗಿದ್ದರೆ ಜೀವಂತ ಮಗುವೊಂದು ಮಾಡದ ತಪ್ಪಿಗೆ ಬಲಿಯಾಗುತ್ತಿತ್ತು.
