ಡೆಹ್ರಾಡೂನ್‌[ಜ.26]: ಭಾರತದ ಸಂವಿಧಾನದ ಮೊದಲ ಪ್ರತಿಗಳನ್ನು ಮುದ್ರಿಸಿದ್ದ ಯಂತ್ರವೀಗ ಗುಜರಿ ಸೇರಿದೆ. ಸಂವಿಧಾನದ ಆರಂಭಿಕ 1000 ಪ್ರತಿಗಳನ್ನು ಮುದ್ರಿಸಲು ಬಳಸಿದ್ದ ಯಂತ್ರವನ್ನು ಡೆಹ್ರಾಡೂನ್‌ ಮೂಲದ ಸರ್ವೇ ಆಫ್‌ ಇಂಡಿಯಾ 1.5 ಲಕ್ಷ ರು.ಗಳಿಗೆ ಗುಜರಿ ವಸ್ತುವಾಗಿ ಮಾರಾಟ ಮಾಡಿದೆ.

ಡೆಹ್ರಾಡೂನ್‌ನ ಹಾತಿಬಾರ್ಕಲಾ ಪ್ರದೇಶದಲ್ಲಿರುವ ಕಚೇರಿಯಲ್ಲಿ ಸರ್ವೇ ಆಫ್‌ ಇಂಡಿಯಾದ ಉತ್ತರ ವಲಯ ಪ್ರಿಂಟಿಂಗ್‌ ಗ್ರೂಪ್‌, ಮೂಲ ಹಸ್ತಾಕ್ಷರದಲ್ಲಿ ಬರೆಯಲಾದ ಸಂವಿಧಾನದ ಪ್ರತಿಗಳನ್ನು ಅಚ್ಚು ವಿಧಾನದ ಮೂಲಕ 1000 ಪ್ರತಿಗಳನ್ನು ಮುದ್ರಿಸಿತ್ತು. ಮೊದಲ ಮುದ್ರಣಗೊಂಡ ಪ್ರತಿಗಳು ಈಗಲೂ ಸರ್ವೇ ಆಫ್‌ ಇಂಡಿಯಾ ತನ್ನಲ್ಲಿ ಇಟ್ಟುಕೊಂಡಿದೆ. ಆದರೆ, ಮುದ್ರಣಕ್ಕೆ ಬಳಸಿದ್ದ ಎರಡು ಯಂತ್ರಗಳನ್ನು ಕಳೆದ ವರ್ಷ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾರ್ಥನೆ ಜೊತೆಗೆ ಸಂವಿಧಾನದ ಪೂರ್ವ ಪೀಠಿಕೆ ಪಠಣ ಕಡ್ಡಾಯ: ಸರ್ಕಾರ!

ಬ್ರಿಟನ್‌ನ ಆರ್‌ಡಬ್ಲ್ಯು ಕ್ರಾಬ್‌ಟ್ರೀ ಆ್ಯಂಡ್‌ ಸನ್ಸ್‌ ಕಂಪನಿ ತಯಾರಿಸಿದ್ದ ಸೊವೆರಿನ್‌ ಮತ್ತು ಮೊನಾಚ್‌ರ್‍ ಮಾದರಿಯ ಮುದ್ರಣ ಯಂತ್ರಗಳನ್ನು ನಿರ್ವಹಿಸುವುದು ಈಗ ಬಲು ದುಬಾರಿ ಆಗಿದೆ. ಈ ಯಂತ್ರದಲ್ಲಿ ಸಂವಿಧಾನ ಮುದ್ರಿಸಲಾಗಿತ್ತು ಎಂಬ ಹೆಮ್ಮೆ ಇದೆ. ಆದರೆ ಈ ಯಂತ್ರಗಳಿಂದ ಇಂದು ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಅವುಗಳನ್ನು ಬಿಡಿ ಮಾಡಿ ಗುಜರಿಗೆ ಮಾರಾಟ ಮಾಡಲಾಗಿದೆ. ಸರ್ವೇ ಆಫ್‌ ಇಂಡಿಯಾ ಸರ್ಕಾರದ ಬೇಡಿಕೆಯ ಮೇರೆಗೆ ಹೊಸ ತಂತ್ರಜ್ಞಾನವನ್ನು ಬಳಸಿ 2003​-04 ಮತ್ತು 2018ರಲ್ಲಿ ಸಂವಿಧಾನದ ಪ್ರತಿಗಳನ್ನು ಮುದ್ರಿಸಿದೆ ಎಂದು ಸರ್ವೇಯರ್‌ ಜನರಲ್‌ ಆಫ್‌ ಇಂಡಿಯಾ ನಿವೃತ್ತ ಲೆ.ಜ| ಗಿರೀಶ್‌ ಕುಮಾರ್‌ ತಿಳಿಸಿದ್ದಾರೆ.

'ಸಂವಿಧಾನ ಕರಡು ರಚಿಸಿದ್ದು ಕನ್ನಡಿಗ ಬ್ರಾಹ್ಮಣ ರಾವ್, ಸ್ವತಃ ಅಂಬೇಡ್ಕರ್ ಒಪ್ಪಿದ್ದರು'