ನವದೆಹಲಿ(ಡಿ.28): ವಿಶ್ವಾದ್ಯಂತ ತೀವ್ರ ಆತಂಕ ಮೂಡಿಸಿರುವ ಕೊರೋನಾ ವೈರಸ್‌ನ ಅಬ್ಬರ ಭಾರತದಲ್ಲಿ ಇನ್ನಷ್ಟುಕಡಿಮೆಯಾಗಿದೆ. ಭಾನುವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 18,732 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ದಿನವೊಂದರಲ್ಲಿ ಇಷ್ಟುಕಡಿಮೆ ಜನರಲ್ಲಿ ಸೋಂಕು ಕಂಡುಬರುತ್ತಿರುವುದು ಕಳೆದ 6 ತಿಂಗಳಲ್ಲಿ ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಜು.1ರಂದು ದೇಶದಲ್ಲಿ 18653 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆನಂತರ ದಿನವೊಂದರಲ್ಲಿ ಸೋಂಕಿತರ ಸಂಖ್ಯೆ ಅದೇ ಮಟ್ಟಕ್ಕೆ ಬಂದಿರುವುದು ಇದೇ ಮೊದಲು ಎಂದು ಅಂಕಿ-ಅಂಶಗಳು ತಿಳಿಸಿವೆ. ಇದರೊಂದಿಗೆ ದೇಶದಲ್ಲಿನ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 1,01,87,850ಕ್ಕೆ ಹೆಚ್ಚಳವಾಗಿದೆ.

ಮತ್ತೊಂದೆಡೆ, ಆರು ತಿಂಗಳ ಬಳಿಕ ಶನಿವಾರ 300ಕ್ಕಿಂತ ಕೆಳಕ್ಕೆ ಕುಸಿದಿದ್ದ ಕೊರೋನಾ ಸಾವಿನ ಸಂಖ್ಯೆ ಭಾನುವಾರವೂ 300ರ ಒಳಗೇ ಇದೆ. 279 ಹೊಸ ಸಾವಿನೊಂದಿಗೆ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 1,47,622ಕ್ಕೆ ಏರಿಕೆಯಾಗಿದೆ.

ಇದೇ ವೇಳೆ ಸಕ್ರಿಯ ಕೊರೋನಾ ರೋಗಿಗಳ ಸಂಖ್ಯೆ 2.78 ಲಕ್ಷಕ್ಕೆ ಇಳಿಕೆಯಾಗಿದೆ. ಇದು 170 ದಿನಗಳಲ್ಲೇ ಮೊದಲು. ದೇಶದಲ್ಲಿ 97,61,538 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.95.82ಕ್ಕೆ ಏರಿಕೆಯಾಗಿದೆ.