- ಮಸೀದಿಗಳ ಮುಂದೆ ಮೈಕ್‌ನಲ್ಲಿ ಹನುಮಾನ್‌ ಚಾಲೀಸಾ ಪ್ರಸಾರ- 250 ಎಂಎನ್‌ಎಸ್‌ ಕಾರ‍್ಯಕರ್ತರು ವಶಕ್ಕೆ- ಹಲವೆಡೆ ಆಜಾನ್‌ ಸ್ತಬ್ಧ 

ಮುಂಬೈ (ಮೇ.5): ಮಹಾರಾಷ್ಟ್ರದ (Maharastra) ಮಸೀದಿಗಳಲ್ಲಿ (Mosque) ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕ (Loudspeakers) ತೆಗೆಯುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ನಾಯಕ ರಾಜ್‌ ಠಾಕ್ರೆ (Raj Thackeray) ಆರಂಭಿಸಿರುವ ಅಭಿಯಾನ ಮತ್ತಷ್ಟುತೀವ್ರತೆ ಪಡೆದುಕೊಂಡಿದೆ. ಮೈಕ್‌ ತೆಗೆಯಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮಂಗಳವಾರಕ್ಕೆ ಮುಗಿದ ಬೆನ್ನಲ್ಲೇ, ಬುಧವಾರ ಬೆಳಗ್ಗೆಯಿಂದಲೇ ರಾಜ್ಯದ ಹಲವೆಡೆ ಮಸೀದಿಗಳ ಮುಂದೆ ಎಂಎನ್‌ಎಸ್‌ (MNS) ಕಾರ್ಯಕರ್ತರು ಮೈಕ್‌ಗಳ ಮೂಲಕ ಹನುಮಾನ್‌ ಚಾಲೀಸಾ ( hanuman chalisa) ಪ್ರಸಾರ ಮಾಡಿದ್ದಾರೆ.

ಇದರೊಂದಿಗೆ ರಾಜ್‌ಠಾಕ್ರೆ ಮತ್ತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (CM uddhav thackeray) ನೇತೃತ್ವದ ಮಹಾ ವಿಕಾಸ್‌ ಅಘಾಡಿ (maha vikas aghadi) ಸರ್ಕಾರದ ಸಂಘರ್ಷ ಮತ್ತೊಂದು ಮಜಲು ತಲುಪಿದೆ. ಮತ್ತೊಂದೆಡೆ ರಾಜ್‌ ಠಾಕ್ರೆ ಎಚ್ಚರಿಕೆ ಬೆನ್ನಲ್ಲೇ ರಾಜ್ಯದ ಹಲವು ಕಡೆಗಳಲ್ಲಿ ಮುಂಜಾನೆಯ ಆಜಾನ್‌ ಕೂಗುವಿಕೆಯನ್ನು ಮಸೀದಿಗಳು ನಿಲ್ಲಿಸಿವೆ ಎಂದು ವರದಿಗಳು ಹೇಳಿವೆ.

ಹನುಮಾನ್‌ ಚಾಲೀಸಾ ಪ್ರಸಾರ: ರಾಜ್ಯದ ಹಲವು ಮಸೀದಿಗಳಲ್ಲಿ ಬುಧವಾರ ಆಜಾನ್‌ (Azaan) ಅನ್ನು ಧ್ವನಿರ್ವರ್ಧಕ ಬಳಸಿ ಕೂಗಲಾಗಿದೆ. ಇದರ ವಿರುದ್ಧ ಎಂಎನ್‌ಎಸ್‌ ಹೋರಾಟ ಆರಂಭಿಸಿದ್ದು, ಧ್ವನಿವರ್ಧಕ ಬಳಸಿ ಹನುಮಾನ್‌ ಚಾಲೀಸಾ ಪಠಣಕ್ಕೆ ಕಾರ್ಯಕರ್ತರು ಯತ್ನಿಸಿದ್ದಾರೆ. ಇಂಥ ಸುಮಾರು 250 ಎಂಎನ್‌ಎಸ್‌ ಕಾರ್ಯಕರ್ತರನ್ನು ಮಹಾರಾಷ್ಟ್ರದ ವಿವಿಧೆಡೆ ಬಂಧಿಸಲಾಗಿದೆ. ಮಸೀದಿಗಳಿಗೆ ಪೊಲೀಸ್‌ ಭದ್ರತೆ ಬಿಗಿಗೊಳಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಠಾಕ್ರೆ, ‘ನನ್ನ ಮೇ 4ರ ಗಡುವು ಮುಗಿದಿದೆ. ಸರ್ಕಾರ ಗಡುವು ಪಾಲಿಸಿಲ್ಲ. ಹೀಗಾಗಿ ಎಲ್ಲಿ ಆಜಾನ್‌ ಕೂಗಲಾಗುತ್ತದೋ ಅಲ್ಲಿ, ಹನುಮಾನ್‌ ಚಾಲೀಸಾ ಪಠಿಸಲಾಗುತ್ತದೆ. ಶೇ.90-92ರಷ್ಟುಮಸೀದಿಗಳು ನನ್ನ ಕರೆಯ ಬಳಿಕ ಲೌಡ್‌ಸ್ಪೀಕರ್‌ ಬಳಕೆ ನಿಲ್ಲಿಸಿವೆ. ಆದರೂ ನಮ್ಮ ಅಮಾಯಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರು ಆರಾಮಾಗಿ ತಿರುಗಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.

ಬಾಳಾ ಠಾಕ್ರೆ ವಿಡಿಯೋ ಬಿಡುಗಡೆ: ಈ ನಡುವೆ, ಬಾಳಾ ಠಾಕ್ರೆ ಅವರು ಲೌಡ್‌ಸ್ಪೀಕರ್‌ ಬಳಕೆ ವಿರುದ್ಧ ನೀಡಿದ್ದರ ಕರೆಯೊಂದರ ವಿಡಿಯೋವನ್ನು ರಾಜ್‌ ಬುಧವಾರ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಬಾಳಾ ಅವರು, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿ ಆಗುತ್ತಿರುವ ರಸ್ತೆ ಮೇಲಿನ ನಮಾಜ್‌ ನಿಲ್ಲಿಸಲಾಗುವುದು. ಮಸೀದಿಗಳ ಮೇಲಿನ ಲೌಡ್‌ಸ್ಪೀಕರ್‌ ತೆರವು ಮಾಡಲಾಗುವುದು. ಹಿಂದೂಗಳಿಂದ ಅಭಿವೃದ್ಧಿಗೆ ಅಡ್ಡಿಯಾದರೆ ನನಗೆ ದೂರು ಕೊಡಿ. ಅದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.

ಶಿವಸೇನೆ ತಿರುಗೇಟು: ರಾಜ್‌ ಠಾಕ್ರೆಗೆ ಶಿವಸೇನೆ ನಾಯಕ ಸಂಜಯ ರಾವುತ್‌ ತಿರುಗೇಟು ನೀಡಿದ್ದು, ‘ರಾಜ್ಯದಲ್ಲಿ ಮಸೀದಿಗಳು ಅನುಮತಿ ಪಡೆದು ಇತಿ-ಮಿತಿಯಲ್ಲಿ ಧ್ವನಿವರ್ಧಕ ಬಳಕೆ ಮಾಡುತ್ತಿವೆ. ನಿಯಮದ ಉಲ್ಲಂಘನೆ ಆಗಿಲ್ಲ. ಈ ಬಗ್ಗೆ ನಮಗೆ ಯಾರಿಂದಲೂ ಬುದ್ಧಿವಾದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ’ ಎಂದಿದ್ದಾರೆ.

ಸೂರ್ಯೋದಯ, ಸೂರ್ಯಾಸ್ತದ ವೇಳೆ ಹನುಮಾನ್ ಚಾಲೀಸಾ ಪಠಣ ಆರಂಭಿಸಿದ ದೇಗುಲ

ಮಹಾರಾಷ್ಟ್ರ ದಲ್ಲಿ ಮಸೀದಿಗಳಿಂದ ಧ್ವನಿವರ್ಧಕಗಳ ಮೂಲಕ ಅಜಾನ್‌ ಮೊಳಗಿಸುತ್ತಿರುವ ವಿಚಾರ ತೀವ್ರ ವಿವಾದಕ್ಕೀಡಾಗಿರುವ ಬೆನ್ನಲೇ ಮಧ್ಯಪ್ರದೇಶದ ಇಂದೋರ್‌ನ ದೇವಾಲಯವೊಂದು ದಿನಕ್ಕೆ ಐದು ಬಾರಿ ಹನುಮಾನ್ ಚಾಲೀಸಾ ಮತ್ತು ರಾಮ್‌ಧುನ್ ಅನ್ನು ಮೂರು ಬಾರಿ ಧ್ವನಿವರ್ಧಕದ ಮೂಲಕ ಕೇಳಿಸಲು ಪ್ರಾರಂಭಿಸಿದೆ. ಪರಿಣಾಮವಾಗಿ, ಸ್ಥಳೀಯ ಆಡಳಿತವು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಸಮುದಾಯವನ್ನು ಒತ್ತಾಯಿಸಿದೆ.

ಆಜಾನ್ ಕೇಳುತ್ತಿದ್ದಂತೆಯೇ ಭಾಷಣ ನಿಲ್ಲಿಸಿದ ಯುಪಿ ಡಿಸಿಎಂ, ಜನನಾಯಕನ ನಡೆಗೆ ಭಾರೀ ಮೆಚ್ಚುಗೆ!

ಸ್ಥಳೀಯ ಸಂಘಟನೆಯಾದ ಹಿಂದ್ವಿ ಸ್ವರಾಜ್, ಮಧ್ಯಪ್ರದೇಶದ ಚಂದ್ರಭಾಗ ಪ್ರದೇಶದ ಖೇಡಪತಿ ಹನುಮಾನ್ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಮತ್ತು ರಾಮಧುನ್ (ಶ್ರೀರಾಮನನ್ನು ಸ್ತುತಿಸುವ ಭಕ್ತಿಗೀತೆಗಳು) ದಿನಕ್ಕೆ ಐದು ಬಾರಿ ಪ್ಲೇ ಮಾಡುವಂತೆ ಕೋರಿತ್ತು.ಸಂಸ್ಥೆಯ ಮುಖ್ಯಸ್ಥ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಅಮಿತ್ ಪಾಂಡೆ (Amit Pandey) ಸೋಮವಾರ ಈ ವಿಚಾರವನ್ನು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.