ದೇಶಾದ್ಯಂತ ಇತ್ತೀಚೆಗೆ ಕೋಮು ಸೌಹಾರ್ದತೆ ಕದಡುವಂತಹ ಅನೇಕ ಘಟನೆಗಳು ವರದಿಯಾಗುತ್ತಿವೆ. ಅದರಲ್ಲೂ ಕರ್ನಾಟಕದಿಂದ ಆರಂಭವಾಗಿ ಇಡೀ ದೇಶಕ್ಕೆ ವ್ಯಾಪಿಸಿದ ಹಿಜಾಬ್ ಪ್ರಕರಣ, ಹಲಾಲ್ ವಿವಾದ ಬಳಿಕ ಆರಂಭವಾದ ಮಸೀದಿ ಆವರಣದ ಧ್ವನಿವರ್ಧಕ ಬ್ಯಾನ್ ಮಾಡುವ ವಿಚಾರ ಎಲ್ಲವೂ ಸಮಾಜದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿವೆ. ಹೀಗಿರುವಾಗಲೇ ಯುಪಿ ಡಿಸಿಎಂ ಆಜಾನ್ ಕೇಳಿ ತಮ್ಮ ಭಾಷಣ ನಿಲ್ಲಿಸಿದ ಘಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಲಕ್ನೋ(ಏ.14): ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಬಹಳ ಸಕ್ರಿಯರಾಗಿದ್ದಾರೆ. ರಾಜಧಾನಿ ಲಕ್ನೋದಲ್ಲಿ ಅಂಬೇಡ್ಕರ್ ಜಯಂತಿಯ ಹಿಂದಿನ ದಿನ ಸಂಜೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಅಜಾನ್ ಸಮಯದಲ್ಲಿ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಮಾಹಿತಿ ಪ್ರಕಾರ, ರಾಜಧಾನಿ ಲಕ್ನೋದ ಇಂದಿರಾ ನಗರದಲ್ಲಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಜಯಂತಿಯ ಮುನ್ನಾದಿನದಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅಲ್ಲಿಗೆ ತಲುಪಿದ್ದರು.

ಆಜಾನ್ ಶಬ್ದ ಕೇಳಿದ ಕೂಡಲೇ ಮಾತು ನಿಲ್ಲಿಸಿದ ಡಿಸಿಎಂ

ಈ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಪಕ್ಕದ ಮಸೀದಿಯಿಂದ ಆಜಾನ್ ಸದ್ದು ಕೇಳಿಸಿದೆ, ಕೂಡಲೇ ಡಿಸಿಎಂ ತಮ್ಮ ಭಾಷಣ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಸಂಪೂರ್ಣ ಆಜಾನ್ ಮುಗಿದ ನಂತರವೇ ಅವರು ತಮ್ಮ ಮಾತನ್ನು ಮುಂದುವರೆಸಿದ್ದಾರೆ.

Scroll to load tweet…

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್

ಈ ಸಂಪೂರ್ಣ ಘಟನೆಯನ್ನು ಬಿಜೆಪಿ ಬೆಂಬಲಿಗರೊಬ್ಬರು ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಆಜಾನ್ ಸಮಯದಲ್ಲಿ ಭಾಷಣ ನಿಲ್ಲಿಸಿದ್ದಕ್ಕಾಗಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಮು ಸೌಹಾರ್ದತೆ ಕದಡುವ ಘಟನೆಗಳು ವರದಿಯಾಗುತ್ತಿರುವ ಈ ದಿನಗಳಲ್ಲಿ ಇಂತಹ ಸೌಹಾರ್ದಯುತ ನಡೆ ನೆಟ್ಟಿಗರ ಮನಗೆದ್ದಿದೆ.