ನವದೆಹಲಿ [ನ.02]: ದೇಶದ ಪರಮೋಚ್ಚ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ಲೋಕಪಾಲ’ ಸ್ಥಾಪನೆಯಾಗಿ ಏಳು ತಿಂಗಳು ಕಳೆದಿದ್ದು, ಕಾಯಂ ಕಚೇರಿ ಇಲ್ಲದಿರುವುದರಿಂದ ರಾಜಧಾನಿಯ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುತೂಹಲಕರ ಸಂಗತಿಯೆಂದರೆ ಇದಕ್ಕಾಗಿ ಸರ್ಕಾರವು ಪ್ರತಿ ತಿಂಗಳು 50 ಲಕ್ಷ ರು. ಬಾಡಿಗೆ ಪಾವತಿಸುತ್ತಿದೆ.

ಈ ವರ್ಷದ ಮಾರ್ಚ್ 22ರಂದು ಲೋಕಪಾಲ ಸ್ಥಾಪನೆಯಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್‌ ಅವರು ಲೋಕಪಾಲರಾಗಿ ನೇಮಕಗೊಂಡಿದ್ದಾರೆ. ಹಾಗೆಯೇ ನಾಲ್ವರು ನ್ಯಾಯಾಂಗ ಸದಸ್ಯರು ಹಾಗೂ ನಾಲ್ವರು ನ್ಯಾಯಾಂಗೇತರ ಸದಸ್ಯರೂ ನೇಮಕವಾಗಿದ್ದಾರೆ. ಇವರೆಲ್ಲರೂ ದೆಹಲಿಯ ಸರ್ಕಾರಿ ಸ್ವಾಮ್ಯದ ಅಶೋಕ ಹೋಟೆಲ್‌ನ 12 ಕೊಠಡಿಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಾ.22ರಿಂದ ಅ.31ರವರೆಗೆ 3.85 ಕೋಟಿ ರು.ಗಳನ್ನು ಬಾಡಿಗೆ ರೂಪದಲ್ಲಿ ಹೋಟೆಲ್‌ಗೆ ಪಾವತಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಗೆ ಸರ್ಕಾರ ಈ ಕುರಿತು ಉತ್ತರ ನೀಡಿದೆ.

ಶಾ ಎದುರೇ ಉದ್ಯಮಿ ಖಡಕ್‌ ಮಾತು : ಹೆದರಬೇಡಿ ಎಂದ ವಿಡಿಯೋ ವೈರಲ್‌...

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಲೋಕಪಾಲ ಸ್ಥಾಪನೆಯಾದ ದಿನದಿಂದ ಆರಂಭಿಸಿ ಅಕ್ಟೋಬರ್‌ 31ರವರೆಗೆ ಸರ್ಕಾರಿ ಸೇವಕರ ವಿರುದ್ಧ 1,160 ದೂರುಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಸುಮಾರು 1000 ಅರ್ಜಿಗಳ ವಿಚಾರಣೆಯನ್ನು ಲೋಕಪಾಲ ಪೀಠ ನಡೆಸಿದ್ದು, ಯಾವೊಂದು ಅರ್ಜಿಯ ಕುರಿತೂ ತನಿಖೆಗೆ ಆದೇಶಿಸಿಲ್ಲ. ಏಕೆಂದರೆ ಯಾವುದೇ ದೂರು ಕೂಡ ತನಿಖೆಗೆ ಯೋಗ್ಯವಾಗಿಲ್ಲ ಎಂದು ಆರ್‌ಟಿಐ ಅರ್ಜಿಗೆ ಉತ್ತರ ನೀಡಲಾಗಿದೆ.

ಲೋಕಪಾಲ ಸಂಸ್ಥೆಯು ದೇಶದ ಪ್ರಧಾನಿ, ಸಚಿವರು, ಸಂಸದರು ಹಾಗೂ ಸರ್ಕಾರದ ಎ, ಬಿ, ಸಿ, ಡಿ ದರ್ಜೆಯ ನೌಕರರು ಸೇರಿದಂತೆ ಎಲ್ಲಾ ಸರ್ಕಾರಿ ಸೇವಕರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಪ್ರತಿಷ್ಠಿತ ಸಂಸ್ಥೆಗೆ ಇನ್ನೂ ಕಾಯಂ ಕಚೇರಿ ಇಲ್ಲದೆ ಪ್ರತಿ ತಿಂಗಳು ದುಬಾರಿ ಬಾಡಿಗೆ ತೆರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಪಾಲ ನ್ಯಾ.ಪಿ.ಸಿ.ಘೋಷ್‌, ‘ಈಗಾಗಲೇ ಕಾಯಂ ಕಚೇರಿಯನ್ನು ಗುರುತಿಸಿದ್ದೇವೆ. ಅದರಲ್ಲಿ ಸ್ವಲ್ಪ ಬದಲಾವಣೆಯಾಗಬೇಕಿದೆ. ಶೀಘ್ರವೇ ಅಲ್ಲಿಗೆ ಕಚೇರಿ ಸ್ಥಳಾಂತರಿಸುತ್ತೇವೆ’ ಎಂದು ಹೇಳಿದ್ದಾರೆ.