ನವದೆಹಲಿ(ಅ.18): ದೇಶದ ಅಭಿವೃದ್ಧಿಗೆ ಪ್ರಮುಖ ತೊಡಕಾಗಿರುವ ಭ್ರಷ್ಟಾಚಾರ ನಿಗ್ರಹಕ್ಕಾಗಿ ರೂಪಿಸಲಾಗಿರುವ ಲೋಕಪಾಲ ಸಂಸ್ಥೆಗೆ 2019-20ನೇ ಸಾಲಿನಲ್ಲಿ ಒಟ್ಟಾರೆ 1427 ಪ್ರಕರಣಗಳು ದಾಖಲಾಗಿವೆ.

ಈ ಪೈಕಿ ಅತಿಹೆಚ್ಚು 613 ಕೇಸ್‌ಗಳು ರಾಜ್ಯ ಸರ್ಕಾರದ ಅಧಿಕಾರಿಗಳು, 245 ಕೇಂದ್ರ ಸರ್ಕಾರದ ಅಧಿಕಾರಿಗಳು, 200 ಸಾರ್ವಜನಿಕ ವಲಯದ ಸಂಸ್ಥೆಗಳು, ಕೇಂದ್ರದ ಹಂತಲ್ಲಿನ ಶಾಸನಬದ್ಧ ಸಂಸ್ಥೆಗಳು, ನ್ಯಾಯಾಂಗ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ನಾಲ್ವರು ಕೇಂದ್ರ ಸಚಿವರು, ಖಾಸಗಿ ಮತ್ತು ಇತರೆ ಸಂಸ್ಥೆಗಳ ವಿರುದ್ಧ 135 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲೋಕಪಾಲ್‌ನ ಅಧಿಕೃತ ದಾಖಲಾತಿಯಿಂದ ಗೊತ್ತಾಗಿದೆ.

ದಾಖಲಾದ ಒಟ್ಟಾರೆ ಪ್ರಕರಣಗಳ ಪೈಕಿ 1347 ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದ್ದು, 220 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ಮತ್ತು ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ. 32 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ.