ನವದೆಹಲಿ(ಮಾ.23): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಪ ರಾಜ್ಯಪಾಲರೇ ಆಡಳಿತದ ಮುಖ್ಯಸ್ಥರು ಎಂದು ಸಾರುವ ಮಸೂದೆಯೊಂದನ್ನು ವಿಪಕ್ಷಗಳ ವಿರೋಧದ ಮಧ್ಯೆಯೇ ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ. ಇದು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಮತ್ತೊಂದು ಸುತ್ತಿನ ಜಟಾಪಟಿಗೆ ಎಡೆ ಮಾಡಿಕೊಟ್ಟಿದೆ.

‘ರಾಷ್ಟ್ರ ರಾಜಧಾನಿ ಪ್ರದೇಶ- ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ, 2021 ಅನ್ನು ಲೋಕಸಭೆ ಅಂಗೀಕರಿಸಿತು. ದೆಹಲಿಯಲ್ಲಿ ಉಪ ರಾಜ್ಯಪಾಲರೇ ಆಡಳಿತದ ಮುಖ್ಯಸ್ಥರು ಎಂಬುದನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ದೆಹಲಿ ಸರ್ಕಾರ ಯಾವುದೇ ಆಡಳಿತಾತ್ಮಕ ಆದೇಶವನ್ನು ಹೊರಡಿಸುವುದಕ್ಕೂ ಮುನ್ನ ಉಪ ರಾಜ್ಯಪಾಲರ ಅಭಿಪ್ರಾಯವನ್ನು ಪಡೆಯುವುದು ಕಡ್ಡಾಯವಾಗಿದೆ.

ಮಸೂದೆ ಮಂಡನೆಯ ವೇಳೆ ಮಾತನಾಡಿದ ಕೇಂದ್ರ ಗೃಹ ಕಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ , ದೆಹಲಿ ಸರ್ಕಾರದ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಅಸ್ಪಷ್ಟತೆ ಸೃಷ್ಟಿಯಾಗಿತ್ತು. ಈ ವಿಷಯವಾಗಿ ಕೋರ್ಟ್‌ಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತಾದ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಿಂದ ಮಸೂದೆಯನ್ನು ಮಂಡಿಸಲಾಗಿದೆ. ದೆಹಲಿಗೆ ಉಪ ರಾಜ್ಯಪಾಲರೇ ಆಡಳಿತಗಾರರಾಗಿದ್ದಾರೆ. ಹೀಗಾಗಿ ಸರ್ಕಾರದ ದೈನಂದಿನ ವ್ಯವಹಾರಗಳನ್ನು ತಿಳಿದುಕೊಳ್ಳುವ ಅಧಿಕಾರ ಅವರಿಗೆ ಇದೆ. ನಾವು ದೆಹಲಿ ಸರ್ಕಾರದಿಂದ ಯಾವುದೇ ಅಧಿಕಾರವನ್ನು ಕಿತ್ತುಕೊಂಡಿಲ್ಲ ಅಥವಾ ಹೆಚ್ಚುವರಿ ಅಧಿಕಾರವನ್ನು ಉಪ ರಾಜ್ಯಪಾಲರಿಗೆ ನೀಡಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಆಡಳಿತಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಆಡಳಿತ ದಕ್ಷತೆಯನ್ನು ಹೆಚ್ಚಿಸಲು ಮಸೂದೆಯಿಂದ ನೆರವಾಗಲಿದೆ’ ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೆಹಲಿಯನ್ನು ಸೀಮಿತ ಅಧಿಕಾರ ಹೊಂದಿರುವ ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ‘ರಾಷ್ಟ್ರ ರಾಜಧಾನಿ ಪ್ರದೇಶ- ದೆಹಲಿ ಸರ್ಕಾರ’ ಕಾಯ್ದೆ- 1991 ಅನ್ನು ಜಾರಿಗೊಳಿಸಲಾಯಿತು. 1996ರಿಂದಲೂ ದೆಹಲಿ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಸ್ನೇಹಯುತ ಸಂಬಂಧವನ್ನು ಕಾಪಾಡಿಕೊಂಡು ಬಂದಿದೆ. ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಬರಲಾಗುತ್ತಿದೆ. ಆದರೆ, 2015ರಲ್ಲಿ ದೆಹಲಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ವೇಳೆ ಸರ್ಕಾರದ ಆಡಳಿತಾತ್ಮಕ ವಿಷಯಗಳ ಬಗ್ಗೆ ಉಪ ರಾಜ್ಯಪಾಲರ ಅಭಿಪ್ರಾಯ ಪಡೆಯಬೇಕು ಎಂದು ಹೈಕೋರ್ಟ್‌ ಕೂಡ ತನ್ನ ಆದೇಶದಲ್ಲಿ ತಿಳಿಸಿದೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ರೆಡ್ಡಿ ಹೇಳಿದರು.

ಕೇಜ್ರಿವಾಲ್‌ ವಿರೋಧ:

ಇದೇ ವೇಳೆ ಮಸೂದೆ ವಿರುದ್ಧ ಕಿಡಿಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಜನರಿಂದ ಆಯ್ಕೆಯಾದ ಸರ್ಕಾರದ ಅಧಿಕಾರವನ್ನು ಈ ಮಸೂದೆ ಕಿತ್ತುಕೊಳ್ಳಲಿದೆ. ದೆಹಲಿ ಜನತೆಗೆ ಬಿಜೆಪಿ ದ್ರೋಹ ಎಸಗಿದೆ ಎಂದು ಹೇಳಿದ್ದಾರೆ.