ಆರ್ಥಿಕತೆಗೂ ಮಹತ್ವ ನೀಡಬೇಕು: ಮೋದಿ| ಲಾಕ್‌ಡೌನ್‌ನಿಂದ ಸಾವಿರಾರು ಜೀವ ಉಳಿದಿವೆ| ಮುಂದಿನ ಹಾದಿ ಬಗ್ಗೆ ಚಿಂತಿಸಬೇಕಾಗಿದೆ: ಸಿಎಂಗಳ ಜತೆ ಸಂವಾದ| 2 ಗಜ ಅಂತರ, ಮಾಸ್ಕ್‌ ದೈನಂದಿನ ಜೀವನದ ಭಾಗವಾಗಲಿ| ಹಾಟ್‌ಸ್ಪಾಟ್‌ ಅಲ್ಲದ ಕಡೆ ಲಾಕ್‌ಡೌನ್‌ ಸಡಿಲ ಸುಳಿವು

ನವದೆಹಲಿ(ಏ.28): 40 ದಿನಗಳ ಲಾಕ್‌ಡೌನ್‌ ಅಂತ್ಯವಾಗಲು ಇನ್ನು ಕೇವಲ ಒಂದು ವಾರ ಉಳಿದಿರುವಾಗಲೇ, ಕೊರೋನಾ ವಿರುದ್ಧದ ಹೋರಾಟದ ಜತೆಜತೆಗೇ ಆರ್ಥಿಕತೆಗೂ ದೇಶ ಮಹತ್ವ ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತನ್ಮೂಲಕ, ಕೊರೋನಾ ಹಾವಳಿ ಇರುವ ಪ್ರದೇಶಗಳಲ್ಲಿ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಇತರೆಡೆ ಹಂತಹಂತವಾಗಿ ವಾಪಸ್‌ ಪಡೆಯುವ ಸ್ಪಷ್ಟಸುಳಿವು ಬಿಟ್ಟುಕೊಟ್ಟಿದ್ದಾರೆ.

ಕೊರೋನಾ ವೈರಸ್‌ ನಿಯಂತ್ರಣ ಹಾಗೂ ಲಾಕ್‌ಡೌನ್‌ನ ಭವಿಷ್ಯ ನಿರ್ಧರಿಸುವ ಕುರಿತಂತೆ ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಮೋದಿ, ‘ಕೊರೋನಾ ವೈರಸ್‌ ಎಲ್ಲಿ ತೀವ್ರವಾಗಿದೆಯೋ ಅಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ರಾಜ್ಯದಲ್ಲಿ ಮತ್ತೆ 9 ಕೇಸ್‌ ದೃಢ, 11 ಮಂದಿ ಗುಣಮುಖ!

‘ಲಾಕ್‌ಡೌನ್‌ನಿಂದ ಸಾವಿರಾರು ಜೀವಗಳು ಉಳಿದಿವೆ. ಈಗ ಲಾಕ್‌ಡೌನ್‌ ಕುರಿತಂತೆ ಮುಂದೆ ಸಾಗುವ ಬಗ್ಗೆ ಚಿಂತನೆ ನಡೆಸಬೇಕಿದೆ. ಆದರೂ ಕೊರೋನಾ ಪ್ರಭಾವವು ಮುಂದಿನ ದಿನಗಳಲ್ಲಿ ಕಣ್ಣಿಗೆ ಕಾಣುವಂತೆ ಮುಂದುವರಿಯಲಿದೆ. ಕೊರೋನಾ ಅಪಾಯ ಇನ್ನೂ ತಗ್ಗಿಲ್ಲ’ ಎಂದರು.

‘ಮುಂದಿನ ತಿಂಗಳುಗಳಲ್ಲಿ ಕೊರೋನಾ ಪ್ರಭಾವ ಇರಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಕಾರಣ ‘2 ಗಜ ಅಂತರ’ (ಸಾಮಾಜಿಕ ಅಂತರ) ಕಾಯ್ದುಕೊಳ್ಳುವುದನ್ನು ಹಾಗೂ ಮಾಸ್ಕ್‌ ಧರಿಸುವುದನ್ನು ಇನ್ನು ಮುಂದೆ ದೈನಂದಿನ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಜನರಿಗೆ ಕರೆ ನೀಡಿದರು.

‘ಕೊರೋನಾ ಪ್ರಕರಣಗಳು ತೀವ್ರವಾಗಿರುವ ಕೆಂಪು ವಲಯವನ್ನು, ಮೊದಲು ಕಿತ್ತಳೆ ವಲಯವನ್ನಾಗಿ ಪರಿವರ್ತಿಸಿ ರೋಗವನ್ನು ಹತೋಟಿಗೆ ತರಬೇಕು. ನಂತರ ಕಿತ್ತಳೆ ವಲಯವನ್ನು ಹಸಿರು ವಲಯವನ್ನಾಗಿ ಮಾಡಿ ವೈರಾಣು ನಿರ್ಮೂಲನೆ ಮಾಡಬೇಕು’ ಎಂದು ಮೋದಿ ಸೂಚಿಸಿದರು.

ಲಾಕ್‌ಡೌನ್‌ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ

ಅನೇಕ ಜನರು ಈಗ ಕೆಮ್ಮು, ನೆಗಡಿ, ಜ್ವರ ಇದ್ದರೆ ಸ್ವಯಂಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಆರೋಗ್ಯ ಸೇತು ಆ್ಯಪ್‌ ನೆರವಾಗಲಿದ್ದು, ಜನರು ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಕೋರಿದರು.

ವಿಶ್ವವಿದ್ಯಾಲಯಗಳು ಹಾಗೂ ಸಂಶೋಧಕರು ಕೊರೋನಾ ನಿಗ್ರಹಕ್ಕೆ ಸಂಶೋಧನೆ ನಡೆಸಬೇಕು ಎಂದು ಮೋದಿ ಒತ್ತಿ ಹೇಳಿದರು.

‘ಮನೆಯಲ್ಲೇ ಉಳಿದು ವಿಡಿಯೋಗಳಲ್ಲೇ ಸಭೆ ಮಾಡುವ ಪದ್ಧತಿಯನ್ನು ಭಾರತ ಕಳೆದ ಮಾಚ್‌ರ್‍ನಿಂದ ರೂಢಿಸಿಕೊಂಡಿದೆ. ಇದರಿಂದ ಸಾವಿರಾರು ಜೀವಗಳು ಉಳಿದಿವೆ. ಆದರೆ ಕೊರೋನಾ ಅಪಾಯವು ಇನ್ನೂ ತಗ್ಗಿಲ್ಲ. ಹೀಗಾಗಿ ಅದರ ಮೇಲೆ ನಿರಂತರ ನಿಗಾ ಇಡಬೇಕು. ಏಕೆಂದರೆ ಈಗ ಬೇಸಿಗೆ ಇದೆ. ಇದು ಮುಗಿದ ಬಳಿಕ ಮುಂಗಾರು ಆಗಮನವಾಗಲಿದೆ. ಈ ಹಂಗಾಮಿನಲ್ಲಿ ರೋಗ ರುಜಿನುಗಳು ಹರಡಬಹುದು. ಇದರ ಬಗ್ಗೆ ಮಖ್ಯಮಂತ್ರಿಗಳು ಗಮನ ಹರಿಸಬೇಕು’ ಎಂದರು.

ಬೆಂಗಳೂರಿನಲ್ಲಿ ಶೇ.50 ಪಿಪಿಇ ಕಿಟ್‌ ಉತ್ಪಾದನೆ: ಕೊರೋನಾ ಸಮರದಲ್ಲಿ ಸಾಧನೆ!

‘ವೈರಾಣು ದೇಹ ಸೇರುವುದನ್ನು ತಡೆಯುವ ಮಾಸ್ಕ್‌ ಧಾರಣೆ ಇನ್ನು ಮುಂದಿನ ದಿನಗಳಲ್ಲಿ ಜನಜೀವನದ ಒಂದು ಅಂಗವಾಗಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಪ್ರತಿಯೊಬ್ಬರೂ ಕ್ಷಿಪ್ರ ಪ್ರತಿಕ್ರಿಯೆಯತ್ತ ಗಮನ ಹರಿಸಬೇಕು’ ಎಂದು ಕೋರಿದರು.