ನವದೆಹಲಿ(ಮೇ.20): ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್‌ ಸಡಿಲಗೊಂಡ ಬೆನ್ನಲ್ಲೇ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡಿದೆ. ಮಂಗಳವಾರ ಒಂದೇ ದಿನ ದಾಖಲೆಯ 5496 ಪ್ರಕರಣಗಳು ದಾಖಲಾಗಿವೆ. ಸೋಮವಾರವಷ್ಟೇ 1 ಲಕ್ಷ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಈಗ 1,05,498ಕ್ಕೆ ಹೆಚ್ಚಳವಾಗಿದೆ. ಮೇ 10ರಂದು 5426 ಪ್ರಕರಣಗಳು ದಾಖಲಾಗಿದ್ದು ಈವರೆಗಿನ ದೈನಂದಿನ ಗರಿಷ್ಠ ಎನಿಸಿಕೊಂಡಿತ್ತು.

ಇದೇ ವೇಳೆ ಕೊರೋನಾಕ್ಕೆ ಮಂಗಳವಾರ ದೇಶದಲ್ಲಿ 116 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 3145ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ದೇಶಾದ್ಯಂತ 39174 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ 149 ಮಂದಿಗೆ ಸೋಂಕು, 107 ಜನಕ್ಕೆ ಮಹಾರಾಷ್ಟ್ರ ಲಿಂಕ್‌!

ಇನ್ನು ಕೊರೋನಾದ ಕೇಂದ್ರಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ಮತ್ತೆ 2,100 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 37,158ಕ್ಕೆ ಏರಿಕೆ ಆಗಿದೆ. ಈ ಮಧ್ಯೆ ದೇಶದ ಇತರ ರಾಜ್ಯಗಳಲ್ಲೂ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ 12448ಕ್ಕೆ ಏರಿಕೆಯಾಗಿದ್ದರೆ, ಗುಜರಾತಿನಲ್ಲಿ 12141 ಹಾಗೂ ದೆಹಲಿಯಲ್ಲಿ 10554 ಪ್ರಕರಣಗಳು ದಾಖಲಾಗಿವೆ.