ನವದೆಹಲಿ(ಏ.13): ಕೊರೋನಾ ವೈರಸ್ ಭಾರತದಲ್ಲಿ ಗಂಭೀರವಾಗುತ್ತಿದೆ. ಸೋಂಕು ವ್ಯಾಪಕವಾಗಿ ಹರುಡುತ್ತಿದೆ. ಹೀಗಾಗಿ ಲಾಕ್‌ಡೌನ್ ವಿಸ್ತರಿಸಲಾಗುತ್ತಿದೆ. ಲಾಕ್‌ಡೌನ್‌ನಿಂದ ಕೊರೋನಾ ವೈರಸ್ ಹೋಗುತ್ತಾ ಎಂದು ಹಲವರು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಲಾಕ್‌ಡೌನ್ ವೇಳೆ ಮನೆಯಲ್ಲಿ ಇರಲು ಸೂಚಿಸದರೂ ನಮಗೇನಿಲ್ಲ ಎಂದು ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಲಾಕ್‌ಡೌನ್ ಬಳಿಕದ ಕೊರೋನಾ ವೈರಸ್ ವರದಿ ಬಹಿರಂಗವಾಗಿದೆ. ಈ ವರದಿ ಲಾಕ್‌ಡೌನ್ ಎಷ್ಟು ಮುಖ್ಯ ಅನ್ನೋದನ್ನು ಸಾಬೀತು ಪಡಿಸಿದೆ.

ಕೊರೋನಾ ವೈರಸ್ ಸೋಂಕು ನಿವಾರಕ ಟನಲ್ ಡೇಂಜರ್..!.

ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಆಧಿಕಾರಿ ಕೊರೋನಾ ವೈರಸ್ ವರದಿ ಬಹಿರಂಗ ಪಡಿಸಿದ್ದಾರೆ. ದೇಶದ 15 ರಾಜ್ಯಗಳಲ್ಲಿನ 25 ಜಿಲ್ಲೆಗಳಲ್ಲಿ ಲಾಕ್‌ಡೌನ್ ಬಳಿಕ ಒಂದೇ ಒಂದು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಸೋಂಕಿತರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಕಾರಣ ಕೊರೋನಾ ಹರಡಿಲ್ಲ ಎಂದು ಅಧಿಕಾರಿಗ ಹೇಳಿದ್ದಾರೆ. ಇದರಲ್ಲಿ ಕರ್ನಾಟದ 4 ಜಿಲ್ಲೆಗಳು ಸೇರಿವೆ.

ಒಂದೇ ಒಂದು ಹೊಸ ಕೊರೋನಾ ಕೇಸ್ ಇಲ್ಲದ 25 ಜಿಲ್ಲೆಗಳ ವಿವರ ಇಲ್ಲಿದೆ;
ಮಹಾರಾಷ್ಟ್ರದ ಗೊಂಡಿಯಾ,  ಚತ್ತೀಸಘಡದ ರಾಜ್‌ನಂದ ಗಾಂವ್, ದುರ್ಗಾ ಹಾಗೂ ಬಿಲಾಸ್ಪುರ, ಕರ್ನಾಟಕದ ಉಡುಪಿ, ಕೊಡಗು, ತುಮಕೂರು, ದಾವಣಗೆರೆ, ದಕ್ಷಿಣ ಗೋವಾ, ಕೇರಳದ ವಯನಾಡ್ ಹಾಗೂ ಕೊಟಯಂ, ಮಣಿಪುರದ ವೆಸ್ಟ್ ಇಂಫಾಲ್, ಜಮ್ಮು ಕಾಶ್ಮೀರದ ರಜೌರಿ, ಮಿಜೋರಾಂನ ಐಜ್ವಾಲ್, ಪುದುಚೇರಿಯ ಮಾಹೆ, ಪಂಜಾಬ್‌ನ ಎಸ್‌ಬಿಎಸ್ ನಗರ್, ಬಿಹಾರದ ಪಾಟ್ನಾ, ನಲಂದ ಹಾಗೂ ಮುಂಗರ್, ರಾಜಸ್ಥಾನದ ಪ್ರತಾಪಘಡ, ಹರ್ಯಾಣದ ಪಾಣಿಪತ್, ರೋಹ್ಟಕ್, ಸಿರ್ಸಾ, ಉತ್ತರಖಂಡದ ಪೌರಿ ಗರ್ವಾಲ್, ತೆಲಂಗಾಣದ ಭದ್ರಾದರಿ ಕೊತೆಗುಂಡಂ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಇದೇ ವೇಳೆ ಕೇಂದ್ರ ಆರೋಗ್ಯ ಇಲಾಖೆ ಕೊರೋನಾ ಕುರಿತು ಮಾಹಿತಿ ನೀಡಿದೆ. ಭಾನುವಾರ(ಏ.12) 35 ಸೋಂಕಿತರು ಸಾವನ್ನಪ್ಪಿದ್ದಾರೆ. 796 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದೀಗ ಭಾರತದಲ್ಲಿ ಸೋಂಕಿತರ ಸಂಖ್ಯೆ 9152ಕ್ಕೆ ಏರಿಕೆಯಾಗಿದೆ.