ನವದೆಹಲಿ/ಮುಂಬೈ(ಮೇ.10): ಕೋವಿಡ್‌ 2ನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು-ಸಾವು ದಾಖಲಾಗಿದ್ದ ಮಹಾನಗರಿಗಳಾದ ದೆಹಲಿ ಮತ್ತು ಮುಂಬೈನಲ್ಲಿ ಕೊನೆಗೂ ಸೋಂಕು ಇಳಿಮುಖವಾಗುವ ಲಕ್ಷಣಗಳು ಗೋಚರಿಸಿವೆ. ದೆಹಲಿಯಲ್ಲಿ ಭಾನುವಾರ 13326 ಹೊಸ ಸೋಂಕಿತರು ಪತ್ತೆಯಾಗಿದ್ದು, 273 ಜನರು ಸಾವನ್ನಪ್ಪಿದ್ದಾರೆ. ಈ ಸೋಂಕಿನ ಪ್ರಮಾಣವು ಏ.12ರ ನಂತರದ ಕನಿಷ್ಠವಾಗಿದ್ದರೆ, ಸಾವಿನ ಪ್ರಮಾಣ ಏ.21ರ ಬಳಿಕ ಅತಿ ಕಡಿಮೆ ಪ್ರಮಾಣವಾಗಿದೆ.

ನಿತ್ಯವೂ 20000ಕ್ಕೂ ಹೆಚ್ಚು ಕೇಸು 400ಕ್ಕೂ ಹೆಚ್ಚು ಸಾವು ಕಾಣುತ್ತಿದ್ದ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಸೋಂಕು, ಸಾವು ಇಳಿಕೆಯಾಗುತ್ತಿರುವುದು, 2ನೇ ಅಲೆ ತನ್ನ ಗರಿಷ್ಠ ಮುಟ್ಟಿರುವುದರ ಸೂಚನೆ ಎಂದು ಹೇಳಲಾಗಿದೆ.

ಇನ್ನೊಂದೆಡೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸತತ 2ದಿನವೂ 3000ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ. ಭಾನುವಾರ ಮುಂಬೈನಲ್ಲಿ 2403 ಹೊಸ ಪ್ರಕರಣಗಳು ದೃಢಪಟ್ಟಿದ್ದು, 68 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಸಿಟಿವಿಟಿ ಪ್ರಮಾಣ ಶೇ.7.3ಕ್ಕೆ ಇಳಿದಿದೆ. ಈ ಪ್ರಮಾಣ ಶೇ.5ರಷ್ಟಿದ್ದರೆ ಸುರಕ್ಷಿತ ಎಂಬ ಭಾವನೆ ಇದೆ. ಮುಂಬೈ ಇದೀಗ ಆ ಸಂಖ್ಯೆಯ ಸಮೀಪಕ್ಕೆ ಬಂದಿದೆ.

ಮೊದಲನೇ ಅಲೆಯ ವೇಳೆ ಭಾರೀ ಹೊಡೆತ ತಿಂದಿದ್ದ ಮುಂಬೈ, 2ನೇ ಅಲೆ ಎದುರಿಸಲು ಭಾರೀ ಸಿದ್ಧತೆ ನಡೆಸಿತ್ತು. ಹೀಗಾಗಿ ಮಹಾನಗರಿಯಲ್ಲಿ 2ನೇ ಅಲೆ ವೇಳೆ ಗರಿಷ್ಠ ದೈನಂದಿನ ಪ್ರಕರಣ 11000 ದಾಖಲಾಗಿತ್ತು. ಅದಾಗಿದ್ದು ಏ.4ರಂದು. ಅಂದಿನಿಂದಲೂ ಸತತವಾಗಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಕೆಯ ಹಾದಿಯಲ್ಲೇ ಇದೆ.

"

ಕಟ್ಟುನಿಟ್ಟಿನ ಲಾಕ್ಡೌನ್‌ ಎಫೆಕ್ಟ್

- ದೆಹಲಿಯಲ್ಲಿ ಭಾನುವಾರ 13,326 ಹೊಸ ಸೋಂಕಿತರು ಪತ್ತೆ, 273 ಸಾವು

- ತಿಂಗಳ ಹಿಂದೆ ದೆಹಲಿಯಲ್ಲಿ ನಿತ್ಯ 20 ಸಾವಿರಕ್ಕೂ ಹೆಚ್ಚು ಕೇಸು ಬರುತ್ತಿತ್ತು

- ಮುಂಬೈನಲ್ಲಿ ಭಾನುವಾರ ಕೇವಲ 2403 ಕೊರೋನಾ ಕೇಸ್‌ ಪತ್ತೆ

- ಪಾಸಿಟಿವಿಟಿ ಪ್ರಮಾಣ ಶೇ.7.3ಕ್ಕೆ ಇಳಿಕೆ: ಇದು ದೊಡ್ಡ ಆಶಾಕಿರಣ

- ದೆಹಲಿ, ಮುಂಬೈನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿದ್ದರ ಫಲವಿದು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona