'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'
ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ಶಂಕುಸ್ಥಾಪನೆ| ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ: ಟ್ರಸ್ಟ್| ಸಂಜೆ 5ಗಂಟೆಗೆ ಮನೆಯಲ್ಲೇ ದೀಪ ಬೆಳಗಬೇಕೆಂದು ಕೋರುತ್ತೇನೆ
ನವದೆಹಲಿ(ಜು.30): ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ಶಂಕುಸ್ಥಾಪನೆ ಕಾರ‍್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯೆಗೆ ಧಾವಿಸಬೇಡಿ, ಮನೆಯಲ್ಲಿಯೇ ಇದ್ದು ಆ ದಿನ ಸಂಜೆ 5 ಗಂಟೆಗೆ ದೀಪ ಬೆಳಗಿ ಎಂದು ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದ ಜನರಲ್ಲಿ ಬುಧವಾರ ಮನವಿ ಮಾಡಿದೆ.
ಟ್ರಸ್ಟಿನ ಸಾಮಾನ್ಯ ಕಾರ‍್ಯದರ್ಶಿ ಚಂಪತ್ ರೈ, ‘ಐತಿಹಾಸಿಕ ಕಾರ‍್ಯಕ್ರಮದ ದಿನ ಅಯೋಧ್ಯೆಯಲ್ಲಿ ಇರಬೇಕೆಂಬ ಭಕ್ತರ ಆಸೆ ಸಹಜ. ರಾಮಜನ್ಮಭೂಮಿ ಟ್ರಸ್ಟಿಗೂ ಅದೇ ಬಯಕೆ ಇತ್ತು. ಆದರೆ ಕೊರೋನಾ ಕಾರಣದಿಂದ ಜನರು ಸೇರುವುದನ್ನು ಅನಿವಾರ‍್ಯವಾಗಿ ನಿರ್ಬಂಧಿಸಬೇಕಿದೆ. ಹಾಗಾಗಿ ಭಕ್ತರು ಅಂದು ಸಂಜೆ 5ಗಂಟೆಗೆ ಮನೆಯಲ್ಲೇ ದೀಪ ಬೆಳಗಬೇಕೆಂದು ಕೋರುತ್ತೇನೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಭಕ್ತರಿಗೆ ಧನ್ಯವಾದ’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ರಾಮ ಜನ್ಮಭೂಮಿ ಮಂದಿರದ ಅರ್ಚಕ, 16 ಭದ್ರತಾ ಸಿಬ್ಬಂದಿಗೆ ಕೊರೋನಾ!ಮುಂದಿನ ವಾರ ಆಗಸ್ಟ್ 5 ರಂದು ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ನಡೆಯಲಿದೆ. ಆದರೀಗ ಇದಕ್ಕೂ ಮುನ್ನ ಸಮಸ್ಯೆಯೊಂದು ಎದುರಾಗಿದೆ. ರಾಮ ಜನ್ಮಭೂಮಿ ಮಂದಿರದ ಅರ್ಚಕ ಪ್ರದೀಪ್ ದಾಸ್ ಹಾಗೂ ಮಂದಿರ ಸುರಕ್ಷತೆಗೆ ನಿಯೋಜಿಸಿದ್ದ 16 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಪ್ರದೀಪ್ ದಾಸ್ ರಾಮ ಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ರವರ ಶಿಷ್ಯರಾಗಿದ್ದು, ರಾಮಲಲ್ಲಾ ಮಂದಿರದ ಭೂಮಿ ಪೂಜೆಯಲ್ಲೂ ಭಾಗಿಯಾಗುವವರಿದ್ದರು.