ಜಮ್ಮು ಕಾಶ್ಮೀರ ಫಲಿತಾಂಶ ಅತಂತ್ರವಾದರೆ ರಾಜ್ಯಪಾಲರ ಆಟ?
ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಒಂದು ವೇಳೆ ಇಲ್ಲಿ ಫಲಿತಾಂಶವು ಅತಂತ್ರ ವಿಧಾನಸಭೆ ರಚನೆಗೆ ಕಾರಣವಾದರೆ ಲೆಫ್ಟಿನೆಂಟ್ ಗವರ್ನರ್ (ಉಪ ರಾಜ್ಯಪಾಲ) ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಬಗ್ಗೆ ಒಂದು ಸ್ಟೋರಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ ಇಲ್ಲಿ ಮುನ್ನಡೆ ಸಾಧಿಸಿದ್ದು, ಸದ್ಯದ ಟ್ರೆಂಡಿಂಗ್ ಪ್ರಕಾರ ಇಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ 40 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಬಿಜೆಪಿ 30 ಸೀಟುಗಳ ಸಮೀಪ ಬರಲು ಚಡಪಡಿಸುತ್ತಿದೆ. ಒಂದು ವೇಳೆ ಇಲ್ಲಿ ಫಲಿತಾಂಶವು ಅತಂತ್ರ ವಿಧಾನಸಭೆ ರಚನೆಗೆ ಕಾರಣವಾದರೆ ಲೆಫ್ಟಿನೆಂಟ್ ಗವರ್ನರ್ (ಉಪ ರಾಜ್ಯಪಾಲ) ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಇಂದಿನ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರ ಕೆಲವೊಂದು ಕಾಯ್ದೆಗಳಿಗೆ ತಿದ್ದುಪಡಿ ಮೂಲಕ, ರಾಜ್ಯ ವಿಧಾನಸಭೆಗೆ 5 ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಉಪ ರಾಜ್ಯಪಾಲರಿಗೆ ನೀಡಿದೆ. ಈ ನೇಮಕ ವಿಧಾನಸಭೆಯ ಮೊದಲ ಕಲಾಪಕ್ಕೆ ಮೊದಲೇ ಮಾಡಬಹುದಾಗಿದೆ. ಅವರು ಇತರೆ ಸದಸ್ಯರಂತೆ ಮತದಾನ ಸೇರಿ ಎಲ್ಲಾ ಹಕ್ಕು ಹೊಂದಿದ್ದಾರೆ. ಹೀಗಾಗಿ 90 ಸದಸ್ಯಬಲದ ವಿಧಾನಸಭೆಯಲ್ಲಿ ಒಂದು ವೇಳೆ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರದೇ, ಬಿಜೆಪಿ 35ರ ಆಸುಪಾಸು ಬಂದು, ಇತರೆ ಪಕ್ಷೇತರ ಬಲ ಸಿಗುವಂತ ಪರಿಸ್ಥಿತಿ ನಿರ್ಮಾಣವಾದರೆ ಆಗ ಉಪರಾಜ್ಯಪಾಲರಿಂದ ನೇಮಕವಾದ 5 ಸದಸ್ಯರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಚುನಾವಣಾ ಫಲಿತಾಂಶ: ಹರ್ಯಾಣ, ಕಾಶ್ಮೀರ ಈಗಿನ ಟ್ರೆಂಡ್ ಹೀಗಿದೆ ನೋಡಿ
ಸರ್ಕಾರ ರಚನೆಗೆ ಕಾಂಗ್ರೆಸ್, ಎನ್‌ಸಿ ಜೊತೆ ಪಿಡಿಪಿ ಮೈತ್ರಿ?
ಶ್ರೀನಗರ: 10 ವರ್ಷದ ನಂತರ ವಿಧಾನಸಭೆ ಚುನಾವಣೆ ಎದುರಿಸಿರುವ ಕಾಶ್ಮೀರದಲ್ಲಿಇಂದು ಫಲಿತಾಂಶ ಹೊರಬೀಳಲಿದ್ದು. ಫಲಿತಾಂಶ ಅತಂತ್ರವಾಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ನಡುವೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್, ಎನ್‌ಸಿ, ಪಿಡಿಪಿ ಒಂದಾಗಬಹುದು ಎಂಬ ಸುಳಿವನ್ನು ಎನ್‌ಸಿ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಪರೋಕ್ಷವಾಗಿ ನೀಡಿದ್ದಾರೆ.
ಚುನಾವಣಾ ಸಮೀಕ್ಷೆಗಳು ಕಾಶ್ಮೀರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿವೆ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಕೂಡ ಕೈ ಜೋಡಿಸಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಸಿ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ''ಯಾಕೆ ಆಗಬಾರದು?' ಎಂದಿದ್ದಾರೆ. ಈ ಮೂಲಕ ಫಲಿತಾಂಶ ಅತಂತ್ರವಾದರೆ, ಮೈತ್ರಿ ಮಾಡಿಕೊಳ್ಳಲು ಮುಕ್ತರಾಗಿದ್ದೇವೆ ಎನ್ನುವ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇನ್ನೊಂದೆಡೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮತ್ತು ಎನ್‌ಸಿ ಜೊತೆ ಮೈತ್ರಿಗೆ ಸಿದ್ಧ ಎಂದು ಪಿಡಿಪಿ ನಾಯಕರು ಕೂಡಾ ಹೇಳಿದ್ದಾರೆ.
ಕಾಶ್ಮೀರ ಬಹುಮತಕ್ಕಾಗಿ ಬಿಜೆಪಿ ಕುತಂತ್ರ: ವಿಪಕ್ಷ ಆರೋಪ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪರವಾಗಿರುವ ಜನಮತವನ್ನು ದೂರಮಾಡಿ, ಬಹುಮತ ಪಡೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಆರೋಪಿಸಿವೆ. ಅಲ್ಲದೆ ಇಂತಹ ನೀಚ ಕೃತ್ಯಗಳನ್ನು ತಡೆಯಲು ಸಾಧ್ಯವಾದ ಎಲ್ಲವನ್ನೂ ಮಾಡುವುದಾಗಿ ಪಣ ತೊಟ್ಟಿರುವುದಾಗಿ ಹೇಳಿವೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಸೋಲಿನ ಭೀತಿಯಲ್ಲಿರುವ ಬಿಜೆಪಿ ಬಹುಮತ ಗಳಿಸಲು ಕುತಂತ್ರದ 'ಚಾಣಕ್ಯ ನೀತಿ' ಅನುಕರಿಸುತ್ತಿದೆ. ಇದರ ಭಾಗವಾಗಿ ಅತಂತ್ರ ವಿಧಾನಸಭೆಯ ಅಪೇಕ್ಷೆಯಲ್ಲಿದೆ. ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಹಾಗೂ ಆಧಾರ ಇದೆ. ಪ್ರಜಾಪ್ರಭುತ್ವ ಹೈಜಾಕ್ ಮಾಡಲು ನಾವು ಬಿಡಲ್ಲ' ಎಂದು ಬರೆದಿದ್ದಾರೆ.
ಅತ್ತ ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಮಾತನಾಡಿ, ಜಮ್ಮು ಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ದೊರೆಯುವ ತನಕ ಸಚಿವ ಸಂಪುಟ ರಚನೆಯನ್ನು ತಡ ಮಾಡಬೇಕೆಂದು ಹೇಳಿರುವ ಶೇಖ್ ಅಬ್ದುಲ್ ರಶೀದ್, ಆ ಮೂಲಕ ಕೇಂದ್ರದ ಆಡಳಿತವನ್ನು ಇಲ್ಲಿಯೂ ವಿಸ್ತರಿಸಲು ಬಯಸಿದ್ದಾರೆ. ಅವರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.