Asianet Suvarna News Asianet Suvarna News

'ನೀವು ದೇವರಾ? ಜನ ನಿರ್ಧರಿಸಬೇಕು..' ಮೋದಿ ಹೇಳಿಕೆಗೆ ಮೋಹನ್ ಭಗಾವತ್ ಪರೋಕ್ಷ ಟಾಂಗ್!

‘ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ.

let people decide if you are God says rss chief mohan bhagwat rav
Author
First Published Sep 7, 2024, 9:31 AM IST | Last Updated Sep 7, 2024, 9:31 AM IST

ಪುಣೆ (ಸೆ.7) ‘ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(PM Narendra modi) ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಜು.19ರಂದೂ ಭಾಗವತ್‌, ‘ಒಬ್ಬ ವ್ಯಕ್ತಿಯು ‘ಸೂಪರ್ ಮ್ಯಾನ್‌’ ಆಗಲು ಬಯಸಬಹುದು. ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು. ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ’ ಎಂದು ಹೇಳಿದ್ದರು. ಇದಾದ ನಂತರ ಭಾಗವತ್‌ ಅವರು ಅಂಥದ್ದೇ ಹೇಳಿಕೆ ನೀಡುತ್ತಿರುವುದು 2ನೇ ಬಾರಿ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಎಎಸ್‌ಎಲ್‌ ಭದ್ರತೆ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಮೋದಿ ಹಾಗೂ ಆರೆಸ್ಸೆಸ್‌ ಸಂಬಂಧ ಲೋಕಸಭೆ ಚುನಾವಣೆ ನಂತರ ಹಾಳಾಗುತ್ತಿರುವ ಸಂಕೇತ ಇದು’ ಎಂದಿದ್ದಾರೆ.

ಭಾಗವತ್‌ ಹೇಳಿದ್ದೇನು?:

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುರುವಾರ ರಾತ್ರಿ ಮಾತನಾಡಿದ ಭಾಗವತ್‌, ‘ಕೆಲವರು ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಭಾವಿಸುತ್ತಾರೆ. ಆದರೆ ಮಿಂಚು ಹಾಗೂ ಗುಡುಗು-ಸಿಡಿಲಿನ ಬಳಿಕ ಮೊದಲಿಗಿಂತ ಹೆಚ್ಚು ಕತ್ತಲೆಯಾದಂತೆ ಕಾಣುತ್ತದೆ. ಆದ್ದರಿಂದ, ಕಾರ್ಯಕರ್ತರು ದೀಪದಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಹೊಳೆಯಬೇಕು’ ಎಂದು ಮಾರ್ಮಿಕವಾಗಿ ನುಡಿದರು.

ಎಲ್ಲ ಸಮಸ್ಯೆಗಳಿಗೆ ಸನಾತನ ಧರ್ಮದಲ್ಲಿ ಪರಿಹಾರ: ಮೋಹನ್‌ ಭಾಗವತ್‌

‘ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸವನ್ನು ಮಾಡಲು ಪ್ರಯತ್ನಿಸಬೇಕು. ನಾವು ಹೊಳೆಯಬಾರದು ಅಥವಾ ಎದ್ದು ಕಾಣಬಾರದು ಎಂದು ಯಾರೂ ಹೇಳುತ್ತಿಲ್ಲ. ಕೆಲಸದ ಮೂಲಕ, ಪ್ರತಿಯೊಬ್ಬರೂ ಪೂಜ್ಯ ವ್ಯಕ್ತಿಯಾಗಬಹುದು. ಆದರೆ ನಾವು ಆ ಮಟ್ಟವನ್ನು ತಲುಪಿದ್ದೇವೆಯೇ ಎಂಬುದನ್ನು ಇತರರು ನಿರ್ಧರಿಸುತ್ತಾರೆ. ನಮ್ಮಷ್ಟಕ್ಕೆ ನಾವೇ ‘ನಾವು ದೇವರಾಗಿದ್ದೇವೆ’ ಎಂದು ಘೋಷಿಕೊಳ್ಳಬಾರದು’ ಎಂದರು

Latest Videos
Follow Us:
Download App:
  • android
  • ios