Asianet Suvarna News Asianet Suvarna News

ಅಯೋಧ್ಯೆಯಿಂದ ನಾವು ಕಲಿಯಬೇಕಾದ ಪಾಠಗಳು!

* ಅಯೋಧ್ಯೆಯ ಕತೆ ಎಂದಿಗೂ ಹಳತಾಗುವುದಿಲ್ಲ

* ಅಯೋಧ್ಯೆಗೆ ಈ ಧಾರ್ಮಿಕತೆಯ ಸಂಪರ್ಕ ಇಲ್ಲದಿದ್ದರೂ ಅದಕ್ಕೊಂದು ಆಕರ್ಷಣೆ ಇದೆ

Lessons should learn from ayodhya by TJS George pod
Author
Bangalore, First Published Sep 26, 2021, 1:19 PM IST

ಟಿಜೆಎಸ್‌ ಜಾರ್ಜ್

ನವದೆಹಲಿ(ಸೆ.26): ಅಯೋಧ್ಯೆಯ ಕತೆ ಎಂದಿಗೂ ಹಳತಾಗುವುದಿಲ್ಲ. ಐತಿಹಾಸಿಕ ಹಿನ್ನೆಲೆ, ಅದು ಒಳಗೊಂಡಿರುವ ವ್ಯಕ್ತಿಗಳು, ದುರಂತಗಳು ಮತ್ತು ನಗರಕ್ಕೆ ಸಂಬಂಧಿಸಿದ ವಿಜಯಗಳು ಭಾರತೀಯರ ಮನಸ್ಸಿನಲ್ಲಿ ಎಂದೂ ಹಚ್ಚಹಸಿರಾಗಿರುತ್ತವೆ. ಅದಕ್ಕೆ ಮುಖ್ಯ ಕಾರಣ ರಾಮನ ಕತೆಯ ಮೂಲಕ ಪಡೆದ ಧಾರ್ಮಿಕ ಆಯಾಮವಾಗಿರಬಹುದು. ಅಯೋಧ್ಯೆಗೆ ಈ ಧಾರ್ಮಿಕತೆಯ ಸಂಪರ್ಕ ಇಲ್ಲದಿದ್ದರೂ ಅದಕ್ಕೊಂದು ಆಕರ್ಷಣೆ ಇದೆ ಅಥವಾ ನಾವು ಅದರೊಳಗಿನ ಶ್ರೇಷ್ಠತೆಯನ್ನು ಹೇಳುತ್ತೇವೆ.

ನಮ್ಮ ಪ್ರತಿನಿತ್ಯದ ಚಟುವಟಿಕೆಗಳಲ್ಲಿ ರಾಮನ ನಿರಂತರ ಒಳಗೊಳ್ಳುವಿಕೆಯನ್ನು ಇದು ವಿವರಿಸುತ್ತದೆ. ಈ ತಿಂಗಳು ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರವು ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತಿದೆ. ‘ವಿಶ್ವದಾದ್ಯಂತ ರಾಮಾಯಣದ ಪ್ರಯಾಣ ಮತ್ತು ಸ್ಥಳೀಕರಣದ ಕುರಿತ ಐತಿಹಾಸಿಕ ತಿಳಿವಳಿಕೆಯುಳ್ಳ ಮಹಾಕಾವ್ಯದ ಬಹುಮುಖತೆಯ ಚರ್ಚೆ’ಯೂ ನಡೆಯಲಿದೆ. ಚರ್ಚೆಯಲ್ಲಿ ಜೆಎನ್‌ಯು ಅಧ್ಯಾಪಕ ಎಚ್‌.ಎಸ್‌.ಶಿವಪ್ರಕಾಶ್‌, ನೃತ್ಯಗಾರ್ತಿ ಮಧು ನಟರಾಜ್‌, ಯುರೋಪಿಯನ್‌ ಸ್ಟಡೀಸ್‌ ತಜ್ಞೆ ನೀತಾ ಇನಾಮ್‌ದಾರ್‌, ಮಾಜಿ ವಿದೇಶಾಂಗ ಕಾರ‍್ಯದರ್ಶಿ ನಿರುಪಮಾ ರಾವ್‌, ದೆಹಲಿ ವಿಶ್ವವಿದ್ಯಾಲಯದ ಅಧ್ಯಾಪಕ ಪಾರುಲ್‌ ಪಾಂಡ್ಯ ಧರ್‌ ಮತ್ತು ಹೈದರಾಬಾದ್‌ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಾಪಕ ಸುಚಂದ್ರ ಘೋಷ್‌ ಭಾಗಿಯಾಗಲಿದ್ದಾರೆ.

ಮೂರು ವರ್ಷಗಳ ಹಿಂದೆ ವಾಲೇ ಸಿಂಗ್‌ ಅವರ ‘ಅಯೋಧ್ಯಾ: ಸಿಟಿ ಆಫ್‌ ಫೇತ್‌, ಸಿಟಿ ಆಫ್‌ ಡಿಸ್ಕಾರ್ಡ್‌’ ನಮಗೆ ಅಯೋಧ್ಯೆಯ ದಂತಕಥೆಯ ಅಜೇಯ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ನೆನಪಿಸಿತು. ವಾಸ್ತವವಾಗಿ ಅಯೋಧ್ಯೆಯ ಕುರಿತಾಗಿ ಬರೆದ ಪುಸ್ತಕಗಳ ಸಂಖ್ಯೆಯೂ ಅದರ ವಿವಾದಗಳ ಬಗ್ಗೆ ಗಮನ ಸೆಳೆದವು. ಸಲ್ಮಾನ್‌ ಖುರ್ಷೀದ್‌ ಅವರ ‘ಸನ್‌ ರೈಸ್‌ ಓವರ್‌ ಅಯೋಧ್ಯೆ’ಯಿಂದ ಸರ್ವೇಪಲ್ಲಿ ಗೋಪಾಲ್‌ ಅವರ ‘ದ ಅನಾಟಮಿ ಆಫ್‌ ಅ ಕನ್‌ಫ್ರಂಟೇಷನ್‌’ ವರೆಗೆ ನಮ್ಮ ಕಾಲದ ರಾಷ್ಟ್ರಗಳು ಮತ್ತು ಪುಸ್ತಕಗಳು ಸಾಧ್ಯವಿರುವ ಎಲ್ಲಾ ಕೋನಗಳಿಂದ ಸಮಸ್ಯೆಯನ್ನು ಪರಿಶೀಲಿಸಿವೆ. ಈ ವಿಷಯದಲ್ಲಿ ರಾಜಕೀಯವೂ ತನ್ನ ಒಂದು ಕೊಳಕು ಮುಖವನ್ನು ತೋರಿಸಿದೆ. ಕೃಷ್ಣ ಝಾ ಮತ್ತು ಧೀರೇಂದ್ರ ಝಾ ಬರೆದ ಪುಸ್ತಕ ‘ಅಯೋಧ್ಯೆ, ದ ಡಾರ್ಕ್ ನೈಟ್‌’ನಲ್ಲಿ ಬಾಬ್ರಿ ಮಸೀದಿಯಲ್ಲಿ ರಾಮನ ವಿಗ್ರಹ ಸಿಕ್ಕ ರಹಸ್ಯ ಇತಿಹಾಸದ ಬಗ್ಗೆಯೂ ಹೇಳಲಾಗಿದೆ.

ಭಕ್ತರು ಭಾರತದಲ್ಲಿ ಸಪ್ತ ಪುರಿಗಳು ಎಂಬ ಏಳು ನಗರಗಳ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದಾರೆ. ಮೋಕ್ಷವನ್ನು ಪಡೆಯಲು ಅಯೋಧ್ಯೆ, ಮಥುರಾ, ಹರಿದ್ವಾರ, ಕಾಶಿ, ಕಂಚಿ, ಅವಂತಿಕಾ (ಉಜ್ಜಯಿನಿ) ಮತ್ತು ದ್ವಾರಕಾಕ್ಕೆ ಒಮ್ಮೆ ಭೇಟಿ ನೀಡಬೇಕೆಂಬ ನಂಬಿಕೆ ಇದೆ. ಅಯೋಧ್ಯೆಯಲ್ಲಿ 700ಕ್ಕೂ ಹೆಚ್ಚು ದೇಗುಲಗಳಿವೆ. ಹಾಗಾಗಿ ಇದನ್ನು ವಿಶೇಷ ಸ್ಥಾನಮಾನಗಳನ್ನು ಹೊಂದಿರುವ ನಗರ ಎಂದು ಪರಿಗಣಿಸಬಹುದು. ಆದರೆ ವಾರಾಣಸಿಯಲ್ಲಿ 20,000 ದೇಗುಲಗಳಿವೆ ಎಂದು ಅರಿತುಕೊಂಡಾಗ ನಮ್ಮ ಚಿಂತನೆ ಮಂಕಾಗುತ್ತದೆ. ಇದು ದೇಶದ ಆಧ್ಯಾತ್ಮಿಕ ರಾಜಧಾನಿ ಎಂದು ಹೇಳಿಕೊಳ್ಳಲು ನ್ಯಾಯಸಮ್ಮತೆಯನ್ನು ನೀಡುತ್ತದೆ.

ಅಯೋಧ್ಯೆ ಏಳರಲ್ಲಿ ಒಂದಾಗಿರಬಹುದು. ಆದರೆ ಅಯೋಧ್ಯೆ ಅಪ್ರತಿಮವಾದ ನಿರ್ದಿಷ್ಟಭಾವನಾತ್ಮಕ ಆಕರ್ಷಣೆಯನ್ನು ಹೊಂದಿದೆ. ರಾಮ ಇಲ್ಲಿ ಪ್ರಾಥಮಿಕ ಅಂಶವಾಗಿದ್ದಾನೆ ಎಂಬುದು ನಿಜ. ಆದರೆ ಅಯೋಧ್ಯೆಯ ಪ್ರಸಿದ್ಧಿಯಲ್ಲಿ ದಶರಥನ ಪಾತ್ರವೂ ಅಷ್ಟೇ ಮಹತ್ವದ್ದು ಎಂದು ಭಾವಿಸುವವರ ಪಟ್ಟಿಯಲ್ಲಿ ನಾನೂ ಸೇರಿದ್ದೇನೆ. ರಾಮನ ಪೂರ್ವಾಪರ ಶ್ರೇಷ್ಠವಾದುದು, ಆದರೆ ದಶರಥನ ಪಾತ್ರದ ಉದಾತ್ತತೆ ಅದಕ್ಕಿಂತ ಕಡಿಮೆಯೇನಲ್ಲ.

ನಿಜ, ದಶರಥನ ಕತೆ ಒಂದು ದುರಂತವೇ ಸರಿ. ದಶರಥ ಅಚಾತುರ‍್ಯದಿಂದ ಶ್ರವಣನನ್ನು ಕೊಂದ. ಜೀವನಕ್ಕೆ ಏಕೈಕ ಆಧಾರವಾಗಿದ್ದ ಶ್ರವಣನ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲು ಶ್ರವಣನ ವೃದ್ಧ ಪೋಷಕರಿಗೆ ಸಾಧ್ಯವಾಗಲಿಲ್ಲ. ದುಃಖದಲ್ಲಿದ್ದ ಅವರು ನಿನ್ನ ಮಗನನ್ನೂ ಕಳೆದುಕೊಳ್ಳುವೆ ಎಂದು ದಶರಥನಿಗೆ ಶಾಪ ಹಾಕಿದರು. ಅದು ಹಾಗೇ ಆಯಿತು. ರಾಮನಿಂದ ಬೇರಾದ ದುಃಖವನ್ನು ಅನುಭವಿಸಲು ದಶರಥನಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಅವನು ದುಃಖಕ್ಕೇ ಬಲಿಯಾದ.

ದಶರಥನ ಸಮಸ್ಯೆಗಳು ಅವನ ಧರ್ಮದ ಅನುಸರಣೆಯಿಂದ ಹುಟ್ಟಿಕೊಂಡವು. ಅದು ಅವನ ಪಾತ್ರದ ಶ್ರೇಷ್ಠತೆಯನ್ನೂ ಸಹ ಒತ್ತಿ ಹೇಳಿತು. ರಾಮಾಯಣ ತಜ್ಞ ಆರ್ಶಿಯಾ ಸತ್ತಾರ್‌, ಕೈಕೇಯಿ ಸಾಮಾನ್ಯವಾಗಿ ಒಬ್ಬ ಖಳನಾಯಕಿಯಂತೆ ಕಾಣುತ್ತಾಳೆ. ಆದರೆ ‘ರಾಜತ್ವಕ್ಕೆ ಮೂರು ಸ್ಪರ್ಧಿಗಳು ಇದ್ದಿದ್ದರಿಂದ ರಾಜಮನೆತನದಲ್ಲಿ ತನ್ನ ಮಗನ ಭವಿಷ್ಯವನ್ನು ಭದ್ರಪಡಿಸಲು ಪ್ರಯತ್ನಿಸುವ ಮೂಲಕ ತಾಯಿಯಾಗಿ ತನ್ನ ಧರ್ಮವನ್ನು ಪೂರೈಸುತ್ತಾಳೆ’ ಎಂದಿದ್ದಾರೆ.

ಯುಟೋಪಿಯಾದಂತೆ ರಾಮರಾಜ್ಯದ ದೃಷ್ಟಿಕೋನವನ್ನು ಸೃಷ್ಟಿಸಿದ್ದು ಬಹುಶಃ ಯುದ್ಧತಂತ್ರದ ತಪ್ಪು. ತುಳಸಿದಾಸರು ಎಲ್ಲರೂ ಸಂತೋಷವಾಗಿರುವ, ಭಯ, ದುಃಖ ಇಲ್ಲದೆ ಬದುಕುವ ದೇಶಗಳ ಪರಿಕಲ್ಪನೆಗಳನ್ನು ಜನಪ್ರಿಯಗೊಳಿಸಿದರು. ಎಲ್ಲಾ ಬಯಕೆಗಳೂ ರಾಮರಾಜ್ಯದಲ್ಲಿ ಈಡೇರಿದವು. ಇದು ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ನಡವಳಿಕೆಯ ಜೀವಂತ ರೂಪಕವಾಗಿದೆ.

ಅಂತಹ ಭೂಮಿಯಲ್ಲಿ ಅಧಿಕಾರವು ಕೇಸರಿ ಉಡುಪಿನ, ಅಧಕೃತವಾಗಿ ಯೋಗಿ ಎಂದು ಕರೆಯಲ್ಪಡುವ ವ್ಯಕ್ತಿಯ ಕೈಸೇರಿರುವುದು ಸಹಜ ಎಂದು ತೋರುತ್ತದೆ. ಆದರೆ ಅಯೋಧ್ಯೆಯು ಅಭಿವೃದ್ಧಿಯ ನೆಪದಲ್ಲಿ ಪರಿಸರ ಅನಾಹುತದ ಅಂಚಿನಲ್ಲಿದೆ. ಇದನ್ನು ಇಡೀ ಜಗತ್ತು ಕಾಣುತ್ತಿದೆ. ಕೇವಲ ಸರಯೂ ನದಿಯ ಸ್ವಚ್ಛತೆಗಾಗಿ ಬರೋಬ್ಬರಿ 600 ಕೋಟಿ ರು.ನ ತುರ್ತು ಯೋಜನೆ ಅನುಷ್ಠಾನಗೊಳ್ಳುವ ಹಂತದಲ್ಲಿದೆ.

ರಾಮನಂತೆ ಹರಿಶ್ಚಂದ್ರ ಮತ್ತು ರಘು ಸಹ ಅಯೋಧ್ಯೆಯ ರಾಜರು. ಧರ್ಮವನ್ನು ಎತ್ತಿಹಿಡಿಯಲು ಅವರು ತಮ್ಮ ರಾಜ್ಯವನ್ನೇ ತ್ಯಜಿಸಿದರು. ತುಳಸೀದಾಸರು ಹೂವು ಮತ್ತು ಹಣ್ಣುಗಳಿಗಾಗಿ ಅಯೋಧ್ಯೆಯ ತೋಟಗಳನ್ನು ಕೆದಕಿ ನೋಡಿದರು. ಪರ್ವತಗಳು ರತ್ನಗಳನ್ನು ನೀಡುತ್ತವೆ ಮತ್ತು ಸಾಗರಗಳು ಎಂದೂ ಪ್ರವಾಹವನ್ನು ಸೃಷ್ಟಿಸುವುದಿಲ್ಲ. ಪ್ರಕೃತಿಯ ಇಂಥ ಕ್ರಮಬದ್ಧತೆ ಮತ್ತು ಸಮಾಜದ ಸ್ಥಾಪಿತ ವ್ಯಾಖ್ಯಾನಗಳು ರಾಮರಾಜ್ಯದಲ್ಲಿ ಏಳಿಗೆ ಹೊಂದುತ್ತಿರುವ ಆರ್ಥಿಕತೆಯನ್ನು ಬಲಪಡಿಸುತ್ತವೆ. ನಮ್ಮ ಕಾಲದಲ್ಲಿ ಎಲ್ಲವೂ ವಿವಾದಕ್ಕೆ ಇಳಿದಿದ್ದು, ಅದಕ್ಕೆ ಸೌಹಾರ್ದಯುತ ಪರಿಹಾರವೇ ಇಲ್ಲದಂತಾಗಿದೆ. ಪವಿತ್ರ ಸ್ಥಳದಲ್ಲಿ ಮಸೀದಿ ಅಥವಾ ದೇಗುಲ ತಲೆ ಎತ್ತಬೇಕೇ ಎಂಬ ಪ್ರಶ್ನೆಗೆ ಉತ್ತರಗಳು ಎಂದಿಗೂ ಆ ಪ್ರಶ್ನೆ ಕೇಳಿದ ವ್ಯಕ್ತಿಯ ಧರ್ಮಕ್ಕಿಂತ ಎತ್ತರಕ್ಕಿರಲು ಸಾಧ್ಯವಿಲ್ಲ. ಕವಿ ವಯಲಾರ್‌ ಹೇಳುವಂತೆ, ‘ಮನುಷ್ಯ ಧರ್ಮಗಳನ್ನು ಸೃಷ್ಟಿಸಿದ. ಧರ್ಮ ದೇವರನ್ನು ಸೃಷ್ಟಿಸಿತು. ಮನುಷ್ಯರ ಮನಸ್ಸನ್ನು ಶೋಷಿಸಲು ಧರ್ಮ ಮತ್ತು ದೇವರು ಒಟ್ಟಿಗೆ ಕೈಜೋಡಿಸಿದವು.’

ಅಯೋಧ್ಯೆ ಸಪ್ತ ಪವಿತ್ರ ಸ್ಥಳಗಳಲ್ಲಿ ಒಂದಾಗಿರಬಹುದು. ಆದರೆ ಅಯೋಧ್ಯೆ ಅಪ್ರತಿಮವಾದ ನಿರ್ದಿಷ್ಟಭಾವನಾತ್ಮಕ ಆಕರ್ಷಣೆಯನ್ನು ಹೊಂದಿದೆ. ಅದು ರಾಮ. ರಾಮನೇ ಇಲ್ಲಿ ಪ್ರಾಥಮಿಕ ಅಂಶ. ಆದರೆ ಅಯೋಧ್ಯೆಯ ಪ್ರಸಿದ್ಧಿಯಲ್ಲಿ ದಶರಥನ ಪಾತ್ರವೂ ಅಷ್ಟೇ ಮಹತ್ವದ್ದು ಎಂದು ಭಾವಿಸಿರುವ ಬಹಳಷ್ಟುಜನರಲ್ಲಿ ನಾನೂ ಒಬ್ಬ.

Follow Us:
Download App:
  • android
  • ios