ನವದೆಹಲಿ(ನ.25): 

ಕಾಂಗ್ರೆಸ್ ಹಿರಿಯ ಹಾಗೂ ಪ್ರಭಾವಿ ನಾಯಕ ಅಹ್ಮದ್ ಪಟೇಲ್ ಬಹು ಅಂಗಾಂಗ ವೈಫಲ್ಯದಿಂದ ಬುಧವಾರ ಮುಂಜಾನ್ ೦೩.೩೦ಕ್ಕೆ ಮೃತಪಟ್ಟಿದ್ದಾರೆ. ಅವರ ಪುತ್ರ ಫೈಸಲ್ ಪಟೇಲ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಖಚಿತ ಪಡಿಸಿದ್ದಾರೆ. ಈ ಪ್ರಭಾವಿ ನಾಯಕನ ನಿಧನಕ್ಕೆ ಪಿಎಂ ಮೋದಿ, ರಾಹುಲ್ ಗಾಂಧಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ 'ಅಹ್ಮದ್ ಪಟೇಲ್‌ಜೀಯವರ ನಿಧನದಿಂದ ದುಃಖವಾಗಿದೆ. ಅವರು ಅನೇಕ ವರ್ಷ ಸಾರ್ವಜನಿಕ ಜೀವನವನ್ನು ಸಾಗಿಸಿ ಸಮಾಜ ಸೇಢವೆ ಮಾಡಿದರು. ತಮ್ಮ ತೀಕ್ಷ್ಣ ಬುದ್ಧಿವಂತಿಗೆ ಗುರುತಿಸಿಕೊಂಡಿದ್ದ ಅವರನ್ನು, ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಿದ್ದಕ್ಕಾಗಿ ಯಾವತ್ತೂ ನೆನಪಿಸಿಕೊಳ್ಳಲಾಗುತ್ತದೆ. ಅವರ ಪುತ್ರ ಫೈಸಲ್ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಅಹ್ಮದ್ ಭಾಯಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.

ಹಿರಿಯ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಇದೊಂದು ದುಃಖಭರಿತ ದಿನ. ಶ್ರೀ ಅಹ್ಮದ್ ಪಟೇಲ್ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿದ್ದರು. ಅವರು ಕಾಂಗ್ರೆಸ್‌ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ಪಕ್ಷದೊಂದಿಗಿದ್ದವರು. ಅವರೊಬ್ಬ ಬೆಲೆಕಟ್ಟಲಾಗದ ಆಸ್ತಿಯಾಗಿದ್ದರು. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ಪುತ್ರ ಫೈಸಲ್, ಪತ್ನಿ ಮುಮ್ತಾಜ್ ಹಾಗೂ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.