ದಾವೂದ್ ರೀತಿ ಗ್ಯಾಂಗ್ ಕಟ್ಟಿರುವ ಬಿಷ್ಣೋಯಿ: ಈತನ ಜೊತೆ ಇದ್ದಾರೆ 700 ಶೂಟರ್‌ಗಳು
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಕೊಂದಿದ್ದು ತಾನೇ ಎಂದು ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯಿ, ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶೈಲಿಯಲ್ಲೇ ತನ್ನ ಜಾಲವನ್ನು ಸ್ಥಾಪಿಸಿಕೊಂಡಿದ್ದಾನೆ.
ನವದೆಹಲಿ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಕೊಂದಿದ್ದು ತಾನೇ ಎಂದು ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯಿ ಪಂಜಾಬ್ ಮೂಲದ ಕುಖ್ಯಾತ ಪಾತಕಿ. ಈತ 700 ಶೂಟರ್‌ಗಳ ಪಡೆಯನ್ನೇ ಹೊಂದಿದ್ದು, ಸುಪಾರಿ ಹತ್ಯೆ ದಂಧೆ ನಡೆಸುತ್ತಿದ್ದಾನೆ. 11 ರಾಜ್ಯಗಳಲ್ಲಿ ಈತನ ಪಾತಕ ಕೃತ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶೈಲಿಯಲ್ಲೇ ಈತ ಜಾಲವನ್ನು ಭಾರಿ ಬೇಗನೆ ಸ್ಥಾಪನೆ ಮಾಡಿಕೊಂಡಿದ್ದಾನೆ.
90ರ ದಶಕದಲ್ಲಿ ಸಣ್ಣಪುಟ್ಟ ಅಪರಾಧ ಕೃತ್ಯಗಳ ಮೂಲಕ ಪಾತಕ ಲೋಕ ಪ್ರವೇಶಿಸಿದ ದಾವೂದ್ ಇಬ್ರಾಹಿಂ ನಂತರದ ದಿನಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆ, ಹತ್ಯೆ, ಸುಲಿಗೆ ದಂಧೆ ನಡೆಸುವ ಮೂಲಕ ವಿಜೃಂಭಿಸಿದ. ಬಳಿಕ ಡಿ-ಕಂಪನಿಯನ್ನು ಸ್ಥಾಪಿಸಿಕೊಂಡು ಪಾಕಿಸ್ತಾನಿ ಉಗ್ರ ಸಂಘಟನೆಗಳ ಜತೆ ಕೈಜೋಡಿಸಿದ. ಅದೇ ರೀತಿ ಬಿಷ್ಣೋಯಿ ಕೂಡ ಸಣ್ಣಪುಟ್ಟ ಅಪರಾಧ ಮಾಡಿಕೊಂಡು ಇದ್ದವನು ಇದೀಗ ಉತ್ತರ ಭಾರತವನ್ನೇ ನಡುಗಿಸುತ್ತಿದ್ದಾನೆ.
ಸಲ್ಮಾನ್ ಖಾನ್ ಬೆನ್ನುಬಿಡದ ಕೃಷ್ಣಮೃಗ! ಯೂಟ್ಯೂಬ್ನಲ್ಲಿ ಕೊಲೆ ಬೆದರಿಕೆ ಹಾಕಿದ ಯುವಕ ಅರೆಸ್ಟ್
ಪ್ರಕರಣ ಸಂಬಂಧ ಹಲವು ವರ್ಷಗಳಿಂದ ಬಿಷ್ಣೋಯಿ ತಿಹಾರ್ ಜೈಲಿನಲ್ಲಿದ್ದಾನೆ. ಆದರೆ ಆತನ ಹೆಸರಲ್ಲಿ ಬಿಷ್ಣೋಯಿ ಆಪ್ತ ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಈ ಗ್ಯಾಂಗ್ ಅನ್ನು ಮುನ್ನಡೆಸುತ್ತಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಆತ ಕೆನಡಾ ಹಾಗೂ ಭಾರತೀಯ ತನಿಖಾ ಸಂಸ್ಥೆಗಳ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ.
ಬಿಷ್ಣೋಯಿ ಗ್ಯಾಂಗ್‌ನಲ್ಲಿರುವ 700 ಶೂಟರ್‌ಗಳ ಪೈಕಿ 300 ಮಂದಿ ಪಂಜಾಬ್ ಮೂಲದವರು. ಆರಂಭದಲ್ಲಿ ಪಂಜಾಬ್‌ಗೆ ಸೀಮಿತವಾಗಿದ್ದ ಈ ಗ್ಯಾಂಗ್ ಬೇರೆ ಬೇರೆ ರಾಜ್ಯಗಳ ಪಾತಕಿಗಳ ನೆರವಿನೊಂದಿಗೆ ಉತ್ತರ ಭಾರತದ 11 ರಾಜ್ಯಗಳಿಗೆ ತನ್ನ ನೆಲೆ ವಿಸ್ತರಣೆ ಮಾಡಿದೆ. ಉತ್ತರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಜಾರ್ಖಂಡ್‌ನಲ್ಲೂ ಕಾರ್ಯಾಚರಣೆ ಮಾಡುತ್ತಿದೆ.
ಕೆನಡಾ ಅಥವಾ ತಾವು ಬಯಸಿದ ದೇಶದಲ್ಲಿ ನೆಲೆ ಒದಗಿಸುವ ಆಮಿಷವನ್ನು ಒಡ್ಡಿ ಈ ಗ್ಯಾಂಗ್ ಅಮಾಯಕ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನೂ ಬಳಕೆ ಮಾಡಿಕೊಳ್ಳುತ್ತಿದೆ ಎಂದು ವರದಿಗಳು ಹೇಳಿವೆ. ಪಾಕಿಸ್ತಾನದಲ್ಲಿ ನೆಲೆಯೂರಿರುವ ಖಲಿಸ್ತಾನಿ ಉಗ್ರಗಾಮಿ ಹವೀಂದರ್ ಸಿಂಗ್ ರಿಂಡಾ ಪಂಜಾಬ್‌ನಲ್ಲಿ ತನಗಾಗದವರ ಹತ್ಯೆಗೆ ಈ ಗ್ಯಾಂಗ್ ಅನ್ನು ಬಳಸಿಕೊಳ್ಳುತ್ತಿದ್ದಾನೆ.
ಬಾಬಾ ಸಿದ್ದಿಕಿ ಹತ್ಯೆ ಬಳಿಕ ಬಿಷ್ಣೋಯಿ ಗ್ಯಾಂಗ್‌ನ ಮುಂದಿನ ಗುರಿ ಸಲ್ಮಾನ್ ಖಾನ್!