ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ, ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆ ವಿಷಯಕ್ಕೆ ಮತ್ತೆ ಜೀವ ಬಂದಿದೆ.
ನವದೆಹಲಿ (ಜೂ.15): ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ, ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆ ವಿಷಯಕ್ಕೆ ಮತ್ತೆ ಜೀವ ಬಂದಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಕುರಿತಂತೆ ಹೊಸದಾಗಿ ಪರಿಶೀಲನೆ ನಡೆಸಲು ನಿರ್ಧರಿಸಿರುವ ಕಾನೂನು ಆಯೋಗವು, ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ.
ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿರುವ ಕೇಂದ್ರ ಕಾನೂನು ಆಯೋಗವು, ಆಸಕ್ತರು ಪ್ರಕಟಣೆ ಹೊರಡಿಸಿದ 30 ದಿನಗಳಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಈ ಹಿಂದೆ 21ನೇ ಕಾನೂನು ಆಯೋಗ ಕೂಡ ಈ ವಿಷಯವನ್ನು ಪರಿಶೀಲನೆ ಮಾಡಿ, ಎರಡು ಬಾರಿ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿತ್ತು. 2018ರಲ್ಲಿ ಆಯೋಗದ ಅವಧಿ ಮುಕ್ತಾಯದ ವೇಳೆ ‘ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ’ ಹೆಸರಲ್ಲಿ ಅದು ಸಮಾಲೋಚನಾ ವರದಿ ಪ್ರಕಟಿಸಿತ್ತು.
ಹೊಂದಾಣಿಕೆ ಇಲ್ಲದಿದ್ದರೆ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿ: ಪ್ರತಾಪ್ ಸಿಂಹ ಸವಾಲು
ಆದರೆ ‘ಸಮಾಲೋಚನಾ ವರದಿ ಪ್ರಕಟಿಸಿ ಈಗಾಗಲೇ 3 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ, ಏಕರೂಪ ನಾಗರಿಕ ಸಂಹಿತೆಯ ಪ್ರಸ್ತುತತೆ, ಅದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿವಿಧ ನ್ಯಾಯಾಲಯಗಳು ಹೊರಡಿಸಿರುವ ಆದೇಶಗಳನ್ನು ಗಮನಿಸಿ 22ನೇ ಕಾನೂನು ಆಯೋಗವು, ವಿಷಯದ ಕುರಿತು ಹೊಸದಾಗಿ ಸಮಾಲೋಚನೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ. ಹೀಗಾಗಿ ಆಯೋಗವು ಮತ್ತೊಮ್ಮೆ ಸಾರ್ವಜನಿಕರು, ಧಾರ್ಮಿಕ ಸಂಘಟನೆಗಳಿಂದ ವಿಷಯದ ಕುರಿತು ಅಭಿಪ್ರಾಯ ಆಹ್ವಾನಿಸಲು ನಿರ್ಧರಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದು ಏಕರೂಪ ನಾಗರಿಕ ಸಂಹಿತೆ?: ಪ್ರಸ್ತುತ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಮೊದಲಾದ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಷಯದಲ್ಲಿ ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಇವು ಮಹಿಳೆಯರಿಗೆ ಹಲವು ವಿಷಯಗಳಲ್ಲಿ ಸಮಾನ ಹಕ್ಕು ಕಲ್ಪಿಸಿಲ್ಲ. ಜೊತೆಗೆ ಧಾರ್ಮಿಕ ಕಾಯ್ದೆಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ ಎಂಬ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಾತಿ, ಧರ್ಮದವರಿಗೂ ಎಲ್ಲಾ ವಿಷಯದಲ್ಲಿ ಒಂದೇ ರೀತಿಯ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.
ವಿವಿಧ ರಾಜ್ಯಗಳು ಸಜ್ಜು?: ಪ್ರಸಕ್ತ ಬಿಜೆಪಿ ಆಡಳಿತದ ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಯ ಹಂತದಲ್ಲಿದೆ. ಒಂದು ವೇಳೆ ಅಲ್ಲಿ ಜಾರಿಯಾದರೆ ಅದು ದೇಶದಲ್ಲಿ ಈ ಕಾಯ್ದೆ ಅಂಗೀಕರಿಸಿದ ಮೊದಲ ರಾಜ್ಯವಾಗಲಿದೆ. ಬಿಜೆಪಿ ಆಡಳಿತದ ಇತರೆ ಕೆಲವು ರಾಜ್ಯಗಳಲ್ಲೂ ಇಂಥ ಕಾನೂನು ಜಾರಿಗೆ ಚಿಂತನೆ ಇದೆ.
ಕಾಯ್ದೆ ಪರ ವಾದ ಏನು?
-ಜಾತಿ, ಧರ್ಮ ದೂರವಿಟ್ಟು ದೇಶದ ಪ್ರತಿ ಪ್ರಜೆಯನ್ನು ಒಂದೇ ಕಾನೂನಿನ ಚೌಕಟ್ಟಿಗೆ ತರುತ್ತದೆ.
-ಧರ್ಮದ ಹೆಸರಲ್ಲಿ ನಡೆಸುವ ವೋಟ್ ಬ್ಯಾಂಕ್ ರಾಜಕೀಯಕ್ಕೆ ಇದರಿಂದ ಮುಕ್ತಿ ಸಿಗುತ್ತದೆ.
-ವೈಯಕ್ತಿಕ ಕಾನೂನುಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ. ಇದನ್ನು ತಡೆಯುತ್ತದೆ.
-ಎಲ್ಲ ಧರ್ಮದ ಮಹಿಳೆಯರಿಗೆ ಸಮಾನ ಮತ್ತು ಹೆಚ್ಚಿನ ಹಕ್ಕುಗಳನ್ನು ಹೊಸ ಕಾಯ್ದೆ ನೀಡುತ್ತದೆ.
-ಇದು ನಿಜವಾದ ಜಾತ್ಯತೀತ ಮನೋಭಾವನೆ ಪ್ರೋತ್ಸಾಹಿಸುತ್ತದೆ. ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುತ್ತದೆ.
ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕಾಯ್ದೆ ವಿರೋಧಿಸುವವರ ವಾದ ಏನು?
-ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ಧಾರ್ಮಿಕ ಹಕ್ಕು ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಸರಿಯಲ್ಲ.
-ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಏಕರೂಪ ನಾಗರಿಕ ಸಂಹಿತೆ ಇದನ್ನು ಉಲ್ಲಂಘಿಸುತ್ತದೆ.
-ಧಾರ್ಮಿಕವಾಗಿ ಭಾರೀ ವೈವಿಧ್ಯತೆ ಹೊಂದಿರುವ ಭಾರತದಂಥ ದೇಶಗಳಿಗೆ ಇಂಥ ಕಾಯ್ದೆ ಸೂಕ್ತವಲ್ಲ.
-ಇದು ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ವಾದವನ್ನು ಹೇರುವ ಯತ್ನ ಎಂಬ ಆರೋಪ.
